ಎಂ.ಫ್ರೆಂಡ್ಸ್ ನಿಯೋಗದಿಂದ ಸಿಎಂ ಭೇಟಿ: ಜಿಲ್ಲಾಸ್ಪತ್ರೆಗಳಲ್ಲಿ ರೋಗಿಯ ಸಹವರ್ತಿಗಳ ಊಟದ ವ್ಯವಸ್ಥೆಗೆ ಮನವಿ

Update: 2019-06-07 17:01 GMT

ಮಂಗಳೂರಿನ ಸೇವಾ ಸಂಸ್ಥೆ ಎಂ.ಫ್ರೆಂಡ್ಸ್ ನಿಯೋಗವು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಶುಕ್ರವಾರ ಸಂಜೆ ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ರಾಜ್ಯದ ಎಲ್ಲಾ ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಹವರ್ತಿಗಳಿಗೆ ಮೂರು ಹೊತ್ತಿನ ಉಚಿತ ಊಟದ ವ್ಯವಸ್ಥೆ ಮಾಡುವಂತೆ ವಿನಂತಿಸಿತು.

ಎಂ.ಫ್ರೆಂಡ್ಸ್ ಟ್ರಸ್ಟ್ ಕಾರ್ಯದರ್ಶಿ ರಶೀದ್ ವಿಟ್ಲ ಅವರು ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ, ಎಂ.ಫ್ರೆಂಡ್ಸ್ ಟ್ರಸ್ಟಿಗಳಾದ ಯೂಸುಫ್ ಅಲ್ ಫಲಾಹ್, ಹನೀಫ್ ಕುದ್ದುಪದವು, ಕಲಂದರ್ ಪರ್ತಿಪ್ಪಾಡಿ, ಹಾರಿಸ್ ಕಾನತ್ತಡ್ಕ ನಿಯೋಗದಲ್ಲಿದ್ದರು.

ಎಂ.ಫ್ರೆಂಡ್ಸ್ ಸಂಸ್ಥೆಯ ವತಿಯಿಂದ ಮಂಗಳೂರಿನಲ್ಲಿ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಜೊತೆಗಾರರ ಪ್ರತಿನಿತ್ಯ ರಾತ್ರಿಯ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಸುಮಾರು 450 ರಿಂದ 500 ಮಂದಿಗೆ ಕಳೆದ ಒಂದೂವರೆ ವರ್ಷದಿಂದ 'ಕಾರುಣ್ಯ ಯೋಜನೆ' ಎಂಬ ಹೆಸರಲ್ಲಿ ದಿನನಿತ್ಯ ಚಪಾತಿ, ಪದಾರ್ಥ ಉಚಿತವಾಗಿ ನೀಡಲಾಗುತ್ತದೆ. ಸರಕಾರಿ ಜಿಲ್ಲಾಸ್ಪತ್ರೆಗೆ ಬರುವ ಬಹುತೇಕ ರೋಗಿಗಳೆಲ್ಲಾ ಬಡವರು ಮತ್ತು ಅಶಕ್ತರು. ಅವರು ತುರ್ತು ಸಂದರ್ಭಗಳಲ್ಲಿ ದಾಖಲಾಗಿ ವಾರ, ತಿಂಗಳುಗಟ್ಟಲೆ ಆಸ್ಪತ್ರೆಯಲ್ಲೇ ಇರುತ್ತಾರೆ. ಅವರಿಗೆ ಸರಕಾರ ಚಿಕಿತ್ಸೆ ಜೊತೆಗೆ 3 ಹೊತ್ತು ಊಟವನ್ನೂ ನೀಡುತ್ತಿದೆ. ಅಂತಹವರ ಶುಶ್ರೂಷಕರು ಮಾತ್ರ ಹಣ ಇಲ್ಲದೆ ಬರಿ ಹೊಟ್ಟೆಯಲ್ಲಿರುತ್ತಾರೆ. ಹಸಿದಾಗ ಆಸ್ಪತ್ರೆ ಆವರಣದ ಹೊರಗಡೆ ಬಿಕ್ಷೆ ಬೇಡಿ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮನಗಂಡ ಎಂ.ಫ್ರೆಂಡ್ಸ್ ಸಂಸ್ಥೆ ಅಂತಹವರಿಗೆ ದಾನಿಗಳ ಮೂಲಕ ಭೋಜನದ ವ್ಯವಸ್ಥೆ ಮಾಡುತ್ತಿದೆ ಎಂದು ಮುಖ್ಯಮಂತ್ರಿಗೆ ನೀಡಿರುವ ಮನವಿಯಲ್ಲಿ ತಿಳಿಸಲಾಗಿದೆ.

ಎಂ.ಫ್ರೆಂಡ್ಸ್ ಕಾರುಣ್ಯ ಯೋಜನೆಯನ್ನು ಮನಗಂಡು ಅದರ ವರದಿ ತರಿಸಿ ರಾಜ್ಯಾದ್ಯಂತ ಇರುವ ಎಲ್ಲಾ ಸರಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳ ಸಹವರ್ತಿಗಳಿಗೆ ಮೂರು ಹೊತ್ತಿನ ಊಟದ ವ್ಯವಸ್ಥೆ ಮಾಡಬೇಕೆಂದು ಎಂ.ಫ್ರೆಂಡ್ಸ್ ತನ್ನ ಮನವಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ವಿನಂತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News