×
Ad

ಟ್ರಂಪ್‌ರನ್ನು ಜೈಲಿನಲ್ಲಿ ನೋಡಲು ಬಯಸುತ್ತೇನೆ: ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೊಸಿ

Update: 2019-06-07 22:32 IST

ವಾಶಿಂಗ್ಟನ್, ಜೂ. 7: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಜೈಲಿಗೆ ಕಳುಹಿಸಬೇಕು ಎಂಬುದಾಗಿ ಅಮೆರಿಕ ಸಂಸತ್ತಿನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್ ನ್ಯಾನ್ಸಿ ಪೆಲೊಸಿ ಹೇಳಿದ್ದಾರೆ ಎಂದು ‘ಪೊಲಿಟಿಕೊ’ ಗುರುವಾರ ವರದಿ ಮಾಡಿದೆ.

 ಅಧ್ಯಕ್ಷರ ವಿರುದ್ಧ ವಾಗ್ದಂಡನೆ ನಿರ್ಣಯ ಮಂಡಿಸಬೇಕೇ ಎಂಬ ವಿಷಯದ ಬಗ್ಗೆ ಮುಚ್ಚಿದ ಬಾಗಿಲ ಹಿಂದೆ ನಡೆದ ಡೆಮಾಕ್ರಟಿಕ್ ಸಂಸದರ ಸಭೆಯಲ್ಲಿ ಪೆಲೋಸಿ ಈ ಮಾತುಗಳನ್ನು ಹೇಳಿದ್ದಾರೆ ಎನ್ನಲಾಗಿದೆ.

ಅಮೆರಿಕದ ಸಂಸತ್ತು ಕಾಂಗ್ರೆಸ್‌ನಲ್ಲಿ ಟ್ರಂಪ್‌ರ ರಾಜಕೀಯ ವೈರಿಯಾಗಿರುವ ಪೆಲೋಸಿ, ಟ್ರಂಪ್ ವಿರುದ್ಧ ವಾಗ್ದಂಡನೆ ನಿರ್ಣಯ ಮಂಡಿಸುವುದನ್ನು ಅನುಮೋದಿಸುವುದಿಲ್ಲ ಎಂಬುದಾಗಿ ಹೇಳುತ್ತಾ ಬಂದಿದ್ದಾರೆ. ಬದಲಿಗೆ, ಮುಂದಿನ ವರ್ಷ ಅಧ್ಯಕ್ಷರು ಚುನಾವಣೆಯಲ್ಲಿ ಸೋಲುವುದನ್ನು ನೋಡಲು ತಾನು ಬಯಸುತ್ತೇನೆ ಎಂದಿದ್ದಾರೆ.

 ಆದರೆ, ಹೌಸ್ ಕಮಿಟಿ ಅಧ್ಯಕ್ಷರೊಂದಿಗೆ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ, ಟ್ರಂಪ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಆರಂಭಿಸಬೇಕೇ ಎಂಬ ವಿಚಾರದಲ್ಲಿ ಅವರು ನ್ಯಾಯಾಂಗ ಸಮಿತಿ ಅಧ್ಯಕ್ಷ ಜೆರಿ ನ್ಯಾಡ್ಲರ್ ಜೊತೆ ಮಾತಿನ ಚಕಮಕಿ ನಡೆಸಿದರು.

 ‘‘ಅವರು ವಾಗ್ದಂಡನೆಗೊಳಗಾಗುವುದನ್ನು ನೋಡಲು ನಾನು ಇಷ್ಟಪಡುವುದಿಲ್ಲ, ಅವರನ್ನು ಜೈಲಿನಲ್ಲಿ ನೋಡಲು ಇಷ್ಟಪಡುತ್ತೇನೆ’’ ಎಂದು ಹಲವಾರು ಡೆಮಾಕ್ರಟಿಕ್ ಪಕ್ಷದ ನಾಯಕರನ್ನು ಉಲ್ಲೇಖಿಸಿ ‘ಪೊಲಿಟಿಕೊ’ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News