ಪುತ್ತೂರು: ವೇತನ ಬಂದಿಲ್ಲ, ಸಂಸದ ನಳಿನ್ ಕುಮಾರ್ ಮುಂದೆ ಪೌರ ಕಾರ್ಮಿಕರ ಅಳಲು

Update: 2019-06-07 17:06 GMT

ಪುತ್ತೂರು: ಕಳೆದ 2 ತಿಂಗಳುಗಳಿಂದ ನಮಗೆ ವೇತನ ಬಂದಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ನಮಗೆ ವೇತನ ಕೊಡಿಸುವ ವ್ಯವಸ್ಥೆ ಮಾಡಿಸಿಕೊಡಿ ಎಂದು ಪುತ್ತೂರು ನಗರ ಸಭೆಯ ಖಾಯಂ ಪೌರ ಕಾರ್ಮಿಕರು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮೌಖಿಕ ಮನವಿ ಮಾಡಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶುಕ್ರವಾರ ನಗರಸಭೆಯಲ್ಲಿ ನೆರೆ ಮುಂಜಾಗೃತಾ ಕಾಮಗಾರಿಗಳ ಕುರಿತು ಪುತ್ತೂರು ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಸಭೆ ನಡೆಸಿದ್ದರು. ಸಭೆ ಮುಗಿಸಿದ ಬಳಿಕ ಕಚೇರಿಯಲ್ಲಿ ಸಂಸದರನ್ನು ಭೇಟಿಯಾದ 9 ಮಂದಿ ಖಾಯಂ ಪೌರ ಕಾರ್ಮಿಕರು ವೇತನದ ಸಮಸ್ಯೆಗಳ ಕುರಿತು ಅವರಿಗೆ ಮನವರಿಕೆ ಮಾಡಿದರು. 

ಕಳೆದ ಹಲವಾರು ವರ್ಷಗಳಿಂದ ಖಾಯಂ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ನಮಗೆ ಕಳೆದ ಎಪ್ರಿಲ್ ತಿಂಗಳಿನಿಂದ ವೇತನ ಬಂದಿಲ್ಲ. ಈ ಕುರಿತು ಹಲವಾರು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಈ ತನಕ ವೇತನ ಸಿಕ್ಕಿಲ್ಲ. ಇದರಿಂದಾಗಿ ಜೀವನ ಸಾಗಿಸಲು ಕಷ್ಟವಾಗಿದೆ ಎಂದು ಪೌರಕಾರ್ಮಿಕರಾದ ಗೋಪಾಲ್, ದಯಾನಂದ,ಗೋವಿಂದ, ಲಿಂಗಪ್ಪ,ನವೀನ, ಯಶೋಧಾ,ಐತ್ತಪ್ಪ, ರಾಜು ಮತ್ತು ಆನಂದ ಅವರು ಸಂಸದರ ಮುಂದೆ ಹೇಳಿಕೊಂಡು,  ವೇತನವನ್ನು ಕೂಡಲೇ ಕೊಡಿಸುವಂತೆ ವ್ಯವಸ್ಥೆಗೊಳಿಸಿ ಎಂದು ಮನವಿ ಮಾಡಿದರು. 

ತಕ್ಷಣವೇ ಮನವಿಗೆ ಸ್ಪಂಧಿಸಿದ ಸಂಸದರು ನಗರಸಭೆಯ ಪ್ರಭಾರ ಪೌರಾಯುಕ್ತ ಅರುಣ್ ಅವರಲ್ಲಿ ಈ ಬಗ್ಗೆ ವಿಚಾರಿಸಿದರು.  ರಾಜ್ಯಾದ್ಯಾಂತ ತಾಂತ್ರಿಕ ಸಮಸ್ಯೆಯಿಂದಾಗಿ ವೇತನ ವಿಳಂಬವಾಗಿದೆ. ಎಲ್ಲಾ ನಗರಸಭೆಯಲ್ಲಿಯೂ ಈ ಸಮಸ್ಯೆಯಾಗಿದೆ. ಕೇವಲ ಪೌರ ಕಾರ್ಮಿಕರಿಗೆ ಮಾತ್ರವಲ್ಲ, ನಮಗೂ ಸೇರಿದಂತೆ ಯಾವುದೇ ಸಿಬ್ಬಂದಿಗಳಿಗೆ ಕಳೆದ 2 ತಿಂಗಳಿನಿಂದ ವೇತನ ಸಿಕ್ಕಿಲ್ಲ. ಬರುವ ಸೋಮವಾರ ಇಲ್ಲವೇ ಮಂಗಳವಾರ ಸಮಸ್ಯೆ ಪರಿಹಾರಗೊಂಡು ವೇತನ ಬಟವಾಡೆಯಾಗಲಿದೆ ಎಂದು ಪೌರಾಯುಕ್ತರು ತಿಳಿಸಿದರು.

ಬಳಿಕ ಸಂಸದರು ಪೌರ ಕಾರ್ಮಿಕರನ್ನು ಸಮಾಧಾನ ಪಡಿಸಿ ಮಂಗಳವಾರದ ತನಕ ಕಾಯುವಂತೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News