300ಕ್ಕೂ ಅಧಿಕ ಲೋಕಸಭಾ ಕ್ಷೇತ್ರಗಳಲ್ಲಿ ಚಲಾವಣೆ-ಎಣಿಕೆ ಮತಗಳ ನಡುವೆ ಅಂತರ: ಪ್ರಕಾಶ್ ಅಂಬೇಡ್ಕರ್ ಆರೋಪ

Update: 2019-06-07 17:10 GMT

ಮುಂಬೈ, ಜೂ. 7: 300ಕ್ಕೂ ಅಧಿಕ ಲೋಕಸಭಾ ಕ್ಷೇತ್ರಗಳಲ್ಲಿ ಚಲಾವಣೆಯಾದ ಮತ ಹಾಗೂ ಎಣಿಕೆ ಮಾಡಲಾದ ಮತಗಳ ನಡುವೆ ತಾಳೆಯಾಗುತ್ತಿಲ್ಲ ಎಂದು ವಂಚಿತ್ ಬಹುಜನ್ ಅಘಾದಿಯ ನಾಯಕ ಪ್ರಕಾಶ್ ಅಂಬೇಡ್ಕರ್ ಶುಕ್ರವಾರ ಆರೋಪಿಸಿದ್ದಾರೆ. ಈ ಬಗ್ಗೆ ವಿವರಣೆ ನೀಡುವಂತೆ ಅವರು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದ ಎಲ್ಲ 48 ಲೋಕಸಭಾ ಕ್ಷೇತ್ರಗಳಲ್ಲಿ ಈ ವ್ಯತ್ಯಾಸ ಗಮನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದು ಸರಿ ಎಂದು ಕಂಡು ಬಂದರೆ, ಕೇಂದ್ರದಲ್ಲಿರುವ ನರೇಂದ್ರ ಮೋದಿ ಅವರ ಸರಕಾರದ ನ್ಯಾಯಸಮ್ಮತತೆ ಬಗ್ಗೆ ಪ್ರಶ್ನೆ ಹುಟ್ಟಿಕೊಳ್ಳುತ್ತದೆ ಎಂದು ಅಂಬೇಡ್ಕರ್ ಹೇಳಿದರು. ಮಹಾರಾಷ್ಟ್ರದ 22 ಲೋಕಸಭಾ ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಕ್ಕಿಂತ ಎಣಿಕೆ ಮಾಡಲಾದ ಮತಗಳ ಸಂಖ್ಯೆ ಹೆಚ್ಚಾಗಿದೆ. 26 ಲೋಕಸಭಾ ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಕ್ಕಿಂತ ಎಣಿಕೆ ಮಾಡಲಾದ ಮತ ಕಡಿಮೆಯಾಗಿದೆ ಎಂದು ಅಂಬೇಡ್ಕರ್ ತಿಳಿಸಿದರು. ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಆದುದರಿಂದ ಅದು ಸಾಮಾನ್ಯ ಜನರಿಗೆ ಈ ವ್ಯತ್ಯಾಸದ ಬಗ್ಗೆ ವಿವರಣೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡದೇ ಇದ್ದರೆ, ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News