×
Ad

ಕುದ್ರೋಳಿ: ವ್ಯಕ್ತಿಯ ಶವ ಪತ್ತೆ; ಕೊಲೆ ಶಂಕೆ

Update: 2019-06-07 22:41 IST

ಮಂಗಳೂರು, ಜೂ.7: ನಗರದ ಕುದ್ರೋಳಿ ಗುರುಪುರ ಹೊಳೆಯಲ್ಲಿ ಅಪರಿಚಿತ ಗಂಡಸಿನ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಂದರು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಕುದ್ರೋಳಿ ಸಮೀಪದ ಗುರುಪುರ ಹೊಳೆಯಲ್ಲಿ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊಳೆಯಿಂದ ಮೇಲಕ್ಕೆತ್ತಿ ಪರಿಶೀಲಿಸಿದಾಗ ಎರಡು ಕೈಗಳನ್ನು ಬಟ್ಟೆಯ ತುಂಡಿನಿಂದ ಕಟ್ಟಿದ್ದಲ್ಲದೆ ಕುತ್ತಿಗೆಯನ್ನು ಬಿಗಿದಿರುವುದು, ಹೊಟ್ಟೆ ಭಾಗಕ್ಕೆ ಚೂರಿಯಿಂದ ಇರಿದು ಗಾಯಗೊಳಿಸಿರುವುದು ಕಂಡು ಬಂದಿದೆ.

ಈ ವ್ಯಕ್ತಿಯ ಬಗ್ಗೆ ಆಸುಪಾಸಿನಲ್ಲಿ ಯಾರಿಗೂ ಪರಿಚಯವಿಲ್ಲದ ಕಾರಣ, ಈ ವ್ಯಕ್ತಿಯನ್ನು ಬೇರೆ ಎಲ್ಲೋ ಯಾರೋ ಕೊಲೆ ಮಾಡಿ ನದಿಗೆ ಬಿಸಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೃತದೇಹ ಕೊಳೆತು ಹೋಗಿದ್ದು, ಎರಡು ದಿನಗಳ ಹಿಂದೆ ಕೊಲೆಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೃತಪಟ್ಟ ವ್ಯಕ್ತಿಗೆ ಸುಮಾರು 35ರಿಂದ 40 ವರ್ಷ ವಯಸ್ಸಾಗಿದೆ. ದೇಹದಲ್ಲಿ ಒಳಚಡ್ಡಿ ಮಾತ್ರ ಇದೆ. ಈ ವ್ಯಕ್ತಿಯನ್ನು ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಹೊಳೆಗೆ ಬಿಸಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದವರು ಬಂದರು ಪೊಲೀಸ್ ಇನ್‌ಸ್ಪೆಕ್ಟರ್ (ಮೊ.ಸಂ: 9480805338) ಅಥವಾ ನಗರ ನಿಯಂತ್ರಣ ಕೊಠಡಿಗೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News