ಕೇವಂಟರ್ಸ್‌ ಮೊದಲಿನಂತೆ ಚೆನ್ನಾಗಿ ಉಳಿದಿಲ್ಲ: ದಿಲ್ಲಿ ಉಚ್ಚ ನ್ಯಾಯಾಲಯ

Update: 2019-06-07 17:58 GMT

► ಸೂಪರ್ ಮಿಲ್ಕ್ ಪ್ರೊಡೆಕ್ಟ್ಸ್‌ನಿಂದ 2015ರಲ್ಲಿ ಕೇವಂಟರ್ಸ್‌ ಬ್ರಾಂಡ್ ಮರು ಲೋಕಾರ್ಪಣೆ

► ಪರವಾನಿಗೆದಾರರಿಂದ ಕೇವಂಟರ್ಸ್ ಹೆಸರಲ್ಲಿ ಕಳಪೆ ಗುಣಮಟ್ಟದ ಹಾಲು ಮಾರಾಟದ ಆರೋಪ

ಹೊಸದಿಲ್ಲಿ, ಜೂ. 7: ಭಾರತದ ಜನಪ್ರಿಯ ಮಿಲ್ಕ್‌ಶೇಕ್ ಬ್ರಾಂಡ್ ಕೇವಂಟರ್ಸ್‌ ಗುಣಮಟ್ಟ ಅದರ ಮುಖ್ಯ ಫ್ಯಾಕ್ಟರಿ 1970ರಲ್ಲಿ ಮುಚ್ಚುವ ಮೊದಲು ಇದ್ದಷ್ಟು ಚೆನ್ನಾಗಿ ಉಳಿದಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ಹೇಳಿದೆ. 2015ರಲ್ಲಿ ಕೇವಂಟರ್ಸ್‌ ಬ್ರಾಂಡ್‌ನ ಹಾಲಿನ ಉತ್ಪನ್ನಗಳನ್ನು ಮರು ಲೋಕಾರ್ಪಣೆಗೊಳಿಸಿದ ಸೂಪರ್ ಮಿಲ್ಕ್ ಪ್ರೊಡೆಕ್ಸ್ಟ್ ಲಿಮಿಟೆಡ್ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಕೇವಂಟರ್ಸ್‌ ಬ್ರಾಂಡ್ ಹೆಸರಲ್ಲಿ ಕಳಪೆ ಗುಣಮಟ್ಟದ ಹಾಲಿನ ಉತ್ಪನ್ನವನ್ನು ತನ್ನ ಪರವಾನಿಗೆದಾರ ಪ್ರೈಮ್ ಇಂಟರ್‌ಗ್ಲೋಬ್ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿ ಸೂಪರ್ ಮಿಲ್ಕ್ ಪ್ರೊಡೆಕ್ಸ್ಟ್ ಲಿಮಿಟೆಡ್ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚಾರಣೆ ವೇಳೆ ನ್ಯಾಯಮೂರ್ತಿ ಜೆ.ಆರ್. ಲೋಧಾ ಅವರು ‘‘ಕೇವಂಟರ್ಸ್‌ ಗುಣಮಟ್ಟ ಮೊದಲಿದ್ದಷ್ಟು ಚೆನ್ನಾಗಿ ಉಳಿದಿಲ್ಲ. ನಿಮ್ಮ ಉತ್ಪನ್ನ ಸೇವನೆಗೆ ಸೂಕ್ತವಾಗಿಲ್ಲ. ನಿಮ್ಮ ಉತ್ಪನ್ನವನ್ನು ಬದಲಾಯಿಸಿ’’ ಎಂದು ಸೂಪರ್ ಮಿಲ್ಕ್‌ನ ವಕೀಲರಿಗೆ ಸೂಚಿಸಿತು.

 ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಕಂಪೆನಿಯ ವಕೀಲ, ಪ್ರೈಮ್ ಇಂಟರ್‌ಗ್ಲೋಬ್ ಮಾರಾಟ ಮಾಡಿದ ಉತ್ಪನ್ನವನ್ನು ನ್ಯಾಯಾಧೀಶರು ಖರೀದಿಸಿ ತಂದಿರಬಹುದು ಎಂದರು. ಇದಕ್ಕೆ ನ್ಯಾಯಮೂರ್ತಿ ಲೋಧಾ, ನನಗೆ ಹಲವು ಔಟ್‌ಲೆಟ್‌ಗಳಲ್ಲಿ ಒಂದೇ ಅನುಭವ ಆಗಿದೆ ಎಂದರು. ವಿವಾದವನ್ನು ಮದ್ಯಸ್ಥಿಕೆ ಮೂಲಕ ಬಗೆಹರಿಸಲು ಗಂಭೀರವಾಗಿ ಪ್ರಯತ್ನಿಸುವಂತೆ ನ್ಯಾಯಮೂರ್ತಿ ಸೂಚಿಸಿದರು. ಔಟ್‌ಲೆಟ್‌ಗಳು ಕೇವಂಟರ್ಸ್‌ ಹೆಸರಿನಲ್ಲಿ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ನಿರಾಕರಿಸುವುದಕ್ಕೆ ವಿರುದ್ಧವಾಗಿ ಯಾವುದೇ ಮಧ್ಯಂತರ ತಡೆಯಾಜ್ಞೆ ನೀಡುವುದಕ್ಕೆ ನ್ಯಾಯಾಲಯ ನಿರಾಕರಿಸಿತು.

ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News