ಗಿಡ ನೆಡುವ ಉತ್ಸಾಹ ಒಂದು ದಿನಕ್ಕೆ ಸೀಮಿತವಾಗದಿರಲಿ: ಶಿವಾನಿ ಬಾಳಿಗ
ಬಂಟ್ವಾಳ, ಜೂ. 8: ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸ್ವಾಗತೋತ್ಸವ, ವನಮಹೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಶನಿವಾರ ನಡೆಯಿತು.
ರೋಟರಿ ಕ್ಲಬ್ ಬಂಟ್ವಾಳದ ನಿಯೋಜಿತ ಅಧ್ಯಕ್ಷೆ ಶಿವಾನಿ ಬಾಳಿಗ ಶಾಲಾ ಮೈದಾನದಲ್ಲಿ ಗಿಡ ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಶಾಲೆಗೆ ಸ್ವಾಗತಿಸಲಾಯಿತು. ಸ್ಥಳದಾನಿ, ಕೃಷಿಕ ಮೋಹನ್ ಅವರು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಉಚಿತವಾಗಿ ಪುಸ್ತಕ ವಿತರಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷೆ ಶಿವಾನಿ ಬಾಳಿಗ ಮಾತನಾಡಿ, ಗಿಡ ನೆಡುವ ಉತ್ಸಾಹ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ನಮ್ಮ ಮನೆ, ಶಾಲೆ ಆವರಣದಲ್ಲಿ ನಿತ್ಯ ಗಿಡನೆಡುವ ಕಾಯಕದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳ ಬೇಕು, ಜೊತೆಗೆ ನೆಟ್ಟ ಗಿಡಗಳನ್ನು ಆರೈಕೆ ಮಾಡುವ ಜವಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದರು.
ರೋಟರಿ ನಿಯೋಜಿತ ಕಾರ್ಯದರ್ಶಿ ಸ್ಮಿತಾ ಸಲ್ದಾನ, ಎಸ್‍ಡಿಎಂಸಿ ಉಪಾಧ್ಯಕ್ಷೆ ಮಮತಾ ಕುಪ್ಪಿಲ, ಪುಸ್ತಕ ದಾನಿಗಳಾದ ಯತೀಶ್ ಕೈಕುಂಜೆ, ಜಯಂತ ಅಗ್ರಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಕುಶಲ ಸ್ವಾಗತಿಸಿದರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಧರ ಅಮೀನ್ ಪ್ರಾಸ್ತವಿಕವಾಗಿ ಮಾತನಾಡಿದರು. ತಾಹಿರ ವಂದಿಸಿದರು. ನವೀನ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು, ಶಾಲಾಭಿವೃದ್ದಿ ಸದಸ್ಯರು, ಪಾಲಕರು ಹಾಜರಿದ್ದರು.