ಯುವಜನರಲ್ಲೂ ಸಾಹಿತ್ಯ, ಸಂಸ್ಕೃತಿ ಒಲವು ಮೂಡಿಸಿ: ಎಚ್.ಶಾಂತಾರಾಂ
ಉಡುಪಿ, ಜೂ. 8: ಇಂದು ವಿದ್ಯಾರ್ಥಿಗಳು ಹಾಗೂ ಯುವಜನತೆಯಲ್ಲಿ ನಮ್ಮ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಒಲವು ಮೂಡಿಸಿ ಅಭಿಮಾನ ತಾಳುವಂತೆ ಕಾಲೇಜು ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ಭಾಷಾ ಶಾಸ್ತ್ರದ ವಿದ್ವಾಂಸರು ನೋಡಿಕೊಳ್ಳಬೇಕಾಗಿದೆ ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಹೇಳಿದ್ದಾರೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್‌ಗಳ ಜಂಟಿ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಬಹು ಭಾಷಾತಜ್ಞ ಉಡುಪಿಯ ಡಾ.ಎನ್.ತಿರುಮಲೇಶ್ವರ ಭಟ್ಟರಿಗೆ 2019ನೇ ಸಾಲಿನ ‘ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿ’ ಪ್ರದಾನ ಸಮಾರಂಭದ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಇಂಥ ಸಮಾರಂಭಗಳಲ್ಲಿ ನಾವು ಕೇವಲ ಹಿರಿಯ ತಲೆಗಳು, ಪ್ರಾದ್ಯಾಪಕರು ಹಾಗೂ ಸಾಹಿತ್ಯಾಭಿಮಾನಿಗಳನ್ನು ಮಾತ್ರ ನೋಡುತಿದ್ದೇವೆ. ನಮ್ಮ ಯುವಜನತೆ ಇವುಗಳಲ್ಲಿ ಪಾಲ್ಗೊಳ್ಳುವ ಆಸಕ್ತಿ ತೋರುವುದಿಲ್ಲ. ಹೀಗಾದರೆ ಇಂಥ ಪ್ರಶಸ್ತಿಗಳಸ ಭವಿಷ್ಯವೇನು ಎಂದು ಪ್ರಶ್ನಿಸಿದ ಡಾ.ಶಾಂತಾರಾಮ್, ಸೇಡಿಯಾಪುರಂಥ ವಿದ್ವಾಂಸರನ್ನು ಮುಂದೆಯೂ ಜ್ಞಾಪಿಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ಎಲ್ಲರ ಹೆಗಲ ಮೇಲೂ ಇದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಎನ್.ಟಿ.ಭಟ್, ಈ ಪ್ರಶಸ್ತಿ ನನಗೆ ತಪಸ್ಸು ಮಾಡದೇ ಸಿಕ್ಕಿದ ವರ. ದೊಡ್ಡ ವಿದ್ವಾಂಸರು ಹಾಗೂ ಭಾಷಾ ತಜ್ಞರಿಗೆ ನೀಡುವ ಸೇಡಿಯಾಪು ಪ್ರಶಸ್ತಿಯನ್ನು ನೀಡುವ ಮೂಲಕ ನನ್ನನ್ನೂ ಓರ್ವ ಅರ್ಹನನ್ನಾಗಿ ಸಿದಿರಿ. ನಾನು ಹಲವು ಶಾಖೆಗಳಲ್ಲಿ ಜ್ಞಾನ ಪಡೆದವನು. ಅದು ಪರಿಪೂರ್ಣ ವಾಗಿಯಲ್ಲ. ತಳಸ್ಪರ್ಶಿಯಾಗಿ ಅಧ್ಯಯನ ನಡೆಸಿದವನು ನಾನಲ್ಲ ಎಂದರು.
ನಾನು ಹಿಡಿದ ದಾರಿ ಕನ್ನಡ, ದೊರಕಿದ ದಾರಿ ಇಂಗ್ಲೀಷ್ ಎಂದ ಡಾ. ಎನ್.ಟಿ.ಭಟ್, ಮಾಸ್ತಿಯವರ ಸುಬ್ಬಣ್ಣ ಸೇರಿದಂತೆ ಕನ್ನಡದ ಹಲವು ಕೃತಿಗಳನ್ನು ನಾನು ಜರ್ಮನಿಗೆ ಭಾಷಾಂತರ ಮಾಡಿದ್ದೇನೆ. ಕನ್ನಡದಲ್ಲಿ ಈಗಲೂ ಭಾಷಾಂತರಕಾರನಿಗೆ ಸೂಕ್ತ ಗೌರವ, ಮನ್ನಣೆ ಸಿಗುತ್ತಿಲ್ಲ ಎಂದು ವಿಷಾಧಿಸಿದರು.
ಕನ್ನಡದ ಖ್ಯಾತ ಕಂಪ್ಯೂಟರ್ ಲಿಪಿ ಹಾಗೂ ಭಾಷಾ ತಜ್ಞ ಪ್ರೊ.ಕೆ.ಪಿ.ರಾವ್ ಅವರು ಅಭಿನಂದನಾ ಭಾಷಣ ಮಾಡಿ, ನಿವೃತ್ತಿಯ ನಂತರವೂ ಸದಾ ಕ್ರಿಯಾಶೀಲರಾಗಿರುವ ಎನ್.ಟಿ.ಭಟ್ ಮಾಡಿರುವ ಕೆಲಸ ಸಾರ್ವಜನಿಕರ ಗಮನಕ್ಕೆ ಬಂದೇ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಇರುವ ಇವರು ತೆರೆಮರೆಯಲ್ಲಿ ರುವುದೇ ಹೆಚ್ಚು. ಪ್ರಚಾರಕ್ಕೆ ಹೆಚ್ಚು ಬಾರದಿರುವುದೇ ಇದಕ್ಕೆ ಕಾರಣ. ಬಹುಭಾಷಾ ವಿದ್ವಾಂಸರಾಗಿರುವ ಇವರಿಗೆ ಭಾಷೆ ಮತ್ತು ವ್ಯಾಕರಣ ನೆಚ್ಚಿನ ವಿಷಯಗಳು ಎಂದರು.
ಹಿರಿಯ ಸಂಸ್ಕೃತಿ ಚಿಂತಕ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್ಟ ‘ಸೇಡಿಯಾಪು ಛಂದಸ್ಸಂಪುಟ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸೇಡಿಯಾಪು ಅವರ ಪುತ್ರ ಡಾ.ಎಸ್.ಜೆ.ಭಟ್ ಉಪಸ್ಥಿತರಿದ್ದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ ಆಡಳಿತಾಧಿಕಾರಿ ಪ್ರೊ.ಎಂ.ಎಲ್.ಸಾಮಗ ವಂದಿಸಿದರು.ಸುಶ್ಮಿತಾ ಎ. ಕಾರ್ಯಕ್ರಮ ನಿರೂಪಿಸಿದರು.