×
Ad

ಮಲ್ಪೆ: ಸುನಾಮಿ ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನ

Update: 2019-06-08 18:01 IST

ಉಡುಪಿ, ಜೂ.8: ಸುನಾಮಿಯಂಥ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತುಕ್ರಮಗಳು ಮತ್ತು ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವ ಕುರಿತ ಅಣುಕು ಪ್ರದರ್ಶನ ವೊಂದು ಶನಿವಾರ ಮಲ್ಪೆಯ ಹನುಮಾನ್ ಭಜನಾ ಮಂದಿರದ ಬಳಿ ನಡೆಯಿತು.

ಅಣಕು ಪ್ರದರ್ಶನದಲ್ಲಿ ಬೆಳಗ್ಗೆ 10:40ಕ್ಕೆ ಸುನಾಮಿ ಕುರಿತ ಎಚ್ಚರಿಕೆ ಸ್ವೀಕರಿಸಿದ ಕೂಡಲೇ ಕೇವಲ 2 ನಿಮಿಷದ ಅವಧಿಯಲ್ಲಿ ಉಡುಪಿ ಅಗ್ನಿಶಾಮಕ ಇಲಾಖೆಯ 2 ವಾಹನಗಳು ಸಮುದ್ರ ತೀರದ ಜನರಿಗೆ ಸೈರನ್ ಮೂಲಕ ಎಚ್ಚರಿಕೆ ನೀಡುತ್ತಾ ಸಮುದ್ರ ತೀರಕ್ಕೆ ಧಾವಿಸಿ ಬಂದವು. ಇದೇ ವೇಳೆ ಸಮುದ್ರ ದಲ್ಲಿ ಮುಳುಗುತ್ತಿದ್ದ ಪ್ರವಾಸಿಗರನ್ನು, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ನೀರಿಗಿಳಿದು ಮೇಲಕ್ಕೆ ಕರೆತಂದರು. ಅವರಿಗೆ ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ಅವರಲ್ಲಿ ತುರ್ತು ಚಿಕಿತ್ಸೆಗೆ ಅಗತ್ಯವಿದ್ದವರನ್ನು ಆದ್ಯತೆಯ ಮೇಲೆ ಗುರುತಿಸಿ ಮಲ್ಪೆಯ ಏಳೂರು ಮೊಗವೀರ ಸಭಾಭವನದಲ್ಲಿ ಆಗಲೇ ತೆರೆದಿದ್ದ ನಿರಾಶ್ರಿತರ ಕೇಂದ್ರದ ಆರೋಗ್ಯ ವಿಭಾಗಕ್ಕೆ ಸ್ಥಳಾಂತರಿಸಲಾಯಿತು.

ಆರೋಗ್ಯ ಇಲಾಖೆಯ 2 ಅಂಬುಲೈನ್ಸ್ ಹಾಗೂ ಅಗ್ನಿಶಾಮಕ ಇಲಾಖೆಯ ಎರಡು ವಾಹನಗಳು ಈ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದವು. ನಂತರ ಕೂಡಲೇ ಸ್ಥಳಕ್ಕೇ ಆಗಮಿಸಿದ ಕಂದಾಯ ಇಲಾಖೆಯ ಸಿಬ್ಬಂದಿಗಳು ತೀರ ಪ್ರದೇಶದ ಜನರನ್ನು ಏಳೂರು ಮೊಗವೀರ ಸಮಾಜದಲ್ಲಿನ ನಿರಾಶ್ರಿತರ ಕೇಂದ್ರಕ್ಕೆ ಬಸ್ ಮೂಲಕ ಸಾಗಿಸಿದರು. ನಿರಾಶ್ರಿತರಿಗೆ ಅಲ್ಲಿ ಊಟೋಪಚಾರ, ವಸತಿ ಹಾಗೂ ಆರೋಗ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ಅಣುಕು ಕಾರ್ಯಾಚರಣೆ ಕುರಿತು ಮಾತನಾಡಿದ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಸುನಾಮಿ ಸೇರಿದಂತೆ ಯಾವುದೇ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಜಿಲ್ಲಾಡಳಿತ ಯಾವ ರೀತಿಯಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಲು ಸಿದ್ದವಾಗಿದೆ ಎಂಬುದನ್ನು ಪರಿಶೀಲಿಸಲು ಮತ್ತು ಎಲ್ಲಾ ಇಲಾಖೆ ಗಳು ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಣೆಗೆ ಸಿದ್ದವಾಗಿರುವಂತೆ ಮಾಡಲು ಈ ಅಣಕು ಕಾರ್ಯಾಚರಣೆಯನ್ನು ಆಯೋಜಿಸಲಾಗಿದೆ ಎಂದರು.

ಅಣಕು ಪ್ರದರ್ಶನದ ವೇಳೆ ಕಂಡು ಬರುವ ದೋಷಗಳನ್ನು ಪರಿಶೀಲಿಸಿ ನೈಜ ಕಾರ್ಯಾಚರಣೆ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಯಾಗದಂತೆ ಕಾರ್ಯ ನಿರ್ವಹಿಸಲು ಇದು ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಎದುರಿಸಲು ಈಗಾಗಲೇ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೂಳು ತೆಗೆಯುವ ಕಾರ್ಯ, ವಿದ್ಯುತ್ ಸಂಪರ್ಕ ವ್ಯವಸ್ಥೆ ಹಾಳಾಗದಂತೆ ತಡೆಯಲು ಮೆಸ್ಕಾಂ ವತಿಯಿಂದ ಈಗಾಗಲೇ ಮರಗಳ ಕೊಂಬೆಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ಸಮಸ್ಯೆಯಾಗುವುದನ್ನು ತಪ್ಪಿಸಲು ಈಗಾಗಲೇ ಕ್ರಮಕೈಗೊಳ್ಳಲಾಗುತ್ತಿದೆ. ಅಗ್ನಿಶಾಮಕ, ಹೋಂಗಾರ್ಡ್, ಪೊಲೀಸ್, ಆರೋಗ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಿಗೆ ತುರ್ತು ಸಂದರ್ಭದಲ್ಲಿ ಕರ್ತವ್ಯ ನಿರ್ವಹಣೆಗೆ ಸದಾ ಸನ್ನದ್ದ ರಾಗಿರುವಂತೆ ಸೂಚಿಸಲಾಗಿದೆ. ಹಾಗೂ ಜಿಲ್ಲಾ ಪ್ರಾಕೃತಿಕ ವಿಕೋಪ ನಿಧಿಯಿಂದ ಅಗತ್ಯವಿರುವ ಎಲ್ಲಾ ರಕ್ಷಣಾ ಉಪಕರಣಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿವರಿಸಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ರವಿ ಓಜನಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಂತ್ರಸ್ಥರಿಗೆ ಸೂಕ್ತ ಪುರ್ನವಸತಿ ಕಲ್ಪಿಸಲು ಮತ್ತು ಸಂತ್ರಸ್ಥರ ರಕ್ಷಣೆಗೆ ಅಗತ್ಯವಿರುವ ರಕ್ಷಣಾ ಉಪಕರಣಗಳನ್ನು ವಿತರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ವಿಕೋಪ ಸಂದರ್ಭದಲ್ಲಿ ರಕ್ಷಿಸಿ ದವರಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಆದ್ಯತೆ ಮೇಲೆ ಚಿಕಿತ್ಸೆ ನೀಡಲು ರೆಡ್(ತುರ್ತು), ಎಲ್ಲೊ (ಕಡಿಮೆ ತುರ್ತು), ಗ್ರೀನ್ (ಅತಿಕಡಿಮೆ ತುರ್ತು) ಮತ್ತು ಬ್ಲಾಕ್(ಸಾವು) ರಿಬ್ಬನ್‌ಗಳನ್ನು ಅವರಿಗೆ ತೊಡಿಸುವ ಮೂಲಕ ಶೀಘ್ರದಲ್ಲಿ ಅಗತ್ಯವಿರುವ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಗಳನ್ನು ನೀಡಿದರು.

ಅಣಕು ಕಾರ್ಯಾಚರಣೆಯಲ್ಲಿ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಡಿವೈಎಸ್ಪಿಜೈಶಂಕರ್, ಮಲ್ಪೆಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಧು, ಡಿಹೆಚ್‌ಓ ಎಂ.ಜಿ.ರಾಮ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್, ಜಿಲ್ಲಾ ಅಗ್ನಿಶಾಮಕ ಇಲಾಖೆ ಅಧಿಕಾರಿ ವಸಂತ ಕುಮಾರ್, ಹೋಂಗಾರ್ಡ್‌ನ ಸಹಾಯಕ ಕಮಾಂಡೆಂಟ್ ರಮೇಶ್ ಮತ್ತು ನಗರಸಭೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಉಡುಪಿ ರೆಡ್‌ಕ್ರಾಸ್ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಸುರೇಶ್ ಶೆಣೈ, ಮೀನುಗಾರರ ಸಂಘ ಅಧ್ಯಕ್ಷ ಸತೀಶ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News