ಗೋಶಾಲೆಯಲ್ಲಿ ಹಸಿವಿನಿಂದ ಸಾಯುತ್ತಿರುವ ದನಗಳು: ಸ್ಥಳೀಯರಿಂದ ಪ್ರತಿಭಟನೆ

Update: 2019-06-08 13:03 GMT
ಕೃಪೆ: ANI

ಕನೌಜ್ :  ಉತ್ತರ ಪ್ರದೇಶದ ಕನೌಜ್ ಜಿಲ್ಲೆ ಜಲಾಲಾಬಾದ್ ಎಂಬಲ್ಲಿರುವ ಗೋ ಆಶ್ರಯ ತಾಣದಲ್ಲಿ ಒಂದು ಡಜನಿಗೂ ಅಧಿಕ ದನಗಳು ಹಸಿವಿನಿಂದ ಸತ್ತ ಸುದ್ದಿ ಬಹಿರಂಗಗೊಳ್ಳುತ್ತಲೇ ಸ್ಥಳೀಯರು ಆಶ್ರಯ ತಾಣದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಕನಿಷ್ಠ 15 ದನಗಳು ಹಸಿವಿನಿಂದ ಸಾವನ್ನಪ್ಪಿವೆ ಎಂದು ಸ್ಥಳೀಯರು ಹೇಳುತ್ತಾರೆ. ಇನ್ನೂ ಐದಾರು ಸತ್ತ ದನಗಳನ್ನು ಅಲ್ಲಿನ ಸಿಬ್ಬಂದಿ ವಾಹನಗಳಲ್ಲಿ ಸಾಗಿಸಿದ್ದಾರೆಂದೂ ಸ್ಥಳೀಯರು ದೂರುತ್ತಾರೆ.

ದನಗಳ ಆಶ್ರತಾಣಗಳನ್ನು ಪರಿಶೀಲಿಸಲಾಗಿದ್ದು ಅಲ್ಲಿ ಯಾವುದೇ ದನ ಸತ್ತಿಲ್ಲ, ತನಿಖೆ ನಡೆಯುತ್ತಿದೆ ಎಂದು ಕನೌಜ್ ಹಿರಿಯ ವಿಭಾಗೀಯ ಮ್ಯಾಜಿಸ್ಟ್ರೇಟ್ ಪಿ ಸಿ ಶ್ರೀವಾಸ್ತವ ಹೇಳಿದ್ದಾರೆ.

ಆದರೆ ಸ್ಥಳೀಯ ಹಾಲು ಮಾರಾಟಗಾರ ಸಂದೀಪ್ ಯಾದವ್ ಇದಕ್ಕೆ ತದ್ವಿರುದ್ಧವಾದುದನ್ನು ಹೇಳುತ್ತಾರೆ. ``ನಾನು ಇಲ್ಲಿ ಹಾಲು ಕೊಂಡು ಹೋಗಲು ಬರುತ್ತಿದ್ದೆ. ಇಲ್ಲಿನ ದನಗಳು ಸಾಯುತ್ತಿರುವುದನ್ನು ಕಂಡು ಪ್ರಧಾನರನ್ನು ಕಂಡು ಅವುಗಳ ಆರೈಕೆ ಮಾಡುವಂತೆ ಹೇಳಿದಾಗ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಆದರೆ ಅದೇ ದಿನ ಒಂದು ದನ ಸತ್ತ ಕಾರಣ ಅವರು ಅದರ ದೇಹವನ್ನು  ಗೋಶಾಲೆಯ ಹಿಂದೆ ಇರುವ ಸ್ಥಳದಲ್ಲಿ ಎಸೆದಿದ್ದರು,'' ಎಂದು ಆತ ಹೇಳುತ್ತಾನೆ.

"ಜೇವೋನ್ ಗ್ರಾಮ್ ಸಭಾ ಹಾಗೂ ಬಶೀರಾಪುರ್ ಭಾಗ್ ಇಲ್ಲಿನ ಪ್ರಧಾನರು ಈ ಆಶ್ರಯತಾಣವನ್ನು ನೋಡಿಕೊಳ್ಳುತ್ತಾರೆ ಆದರೆ ದನಗಳು ಹಸಿವು ಬಾಯಾರಿಕೆಯಿಂದ ಬಳಲುತ್ತಿವೆ. ಗೋವುಗಳು ಹಾಗೂ ಗಂಗೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರದ ರಾಜ್ಯದಲ್ಲಿ ಇದು ದನಗಳ ಸ್ಥಿತಿಯಾಗಿದೆ,'' ಎಂದು ಇನ್ನೊಬ್ಬ ಸ್ಥಳೀಯ ವ್ಯಕ್ತಿ ಹೇಳಿದ್ದಾರೆ.

"ಅವರು ದನಗಳ ಕಳೇಬರವನ್ನು ಅಡಗಿಸಲು ಯತ್ನಿಸುತ್ತಿದ್ದಾರೆ. ಇಂತಹ ಗೋರಕ್ಷಕರ ವಿರುದ್ಧ  ಗೋಹತ್ಯೆ ಪ್ರಕರಣ ದಾಖಲಿಸಬೇಕು,'' ಎಂದೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News