ಮಾಹಿತಿ ನೀಡದೆ ಪದಾಧಿಕಾರಿ ಬದಲಿಸಿದರೆ ದಂಡನಾ ಕ್ರಮ: ಎನ್‌ಜಿಒಗಳಿಗೆ ಗೃಹ ಇಲಾಖೆಯ ಎಚ್ಚರಿಕೆ

Update: 2019-06-08 13:36 GMT

ಹೊಸದಿಲ್ಲಿ, ಜೂ.8: ಮಾಹಿತಿ ನೀಡದೆ ಪದಾಧಿಕಾರಿಗಳನ್ನು ಬದಲಾಯಿಸಿದರೆ ದಂಡನಾ ಕ್ರಮ ಕೈಗೊಳ್ಳುವುದಾಗಿ ಸರಕಾರೇತರ ಸಂಸ್ಥೆಗಳಿಗೆ(ಎನ್‌ಜಿಒ) ಕೇಂದ್ರದ ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ.

ಪದಾಧಿಕಾರಿಗಳಲ್ಲಿ ಬದಲಾವಣೆಯಾದರೆ ತಿಂಗಳೊಳಗೆ ಮಾಹಿತಿ ನೀಡಬೇಕೆಂದು ಗೃಹ ಇಲಾಖೆ ಸೂಚಿಸಿದೆ. ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ, 2010ರಡಿ ನೋಂದಾಯಿತಗೊಂಡಿರುವ ಎನ್‌ಜಿಒಗಳು ವಿದೇಶದಿಂದ ದೇಣಿಗೆ ಪಡೆಯಲು ಅರ್ಹವಾಗಿವೆ . ಈ ಸಂಸ್ಥೆಗಳು ಪದಾಧಿಕಾರಿಗಳನ್ನು ಸೇರ್ಪಡೆಗೊಳಿಸುವಾಗ, ಅಥವಾ ಕೈಬಿಡುವಾಗ ಮಾಡಿರುವ ಬದಲಾವಣೆಯನ್ನು , ಮತ್ತು ತಮ್ಮ ಸಂಸ್ಥೆಯ ಪ್ರಮುಖ ಕಾರ್ಯನಿರ್ವಾಹಕರ ಕುರಿತ ಮಾಹಿತಿಯನ್ನು ಆನ್‌ಲೈನ್ ಅರ್ಜಿಯಲ್ಲಿ ತುಂಬಿ ಸಲ್ಲಿಸಬೇಕು.

ಕಾಯ್ದೆಯಡಿ ನೋಂದಾಯಿತವಾಗಿರುವ ಕೆಲವು ಎನ್‌ಜಿಒಗಳು ಗೃಹ ಸಚಿವಾಲಯದ ಗಮನಕ್ಕೆ ತಾರದೆ ತಮ್ಮ ಪದಾಧಿಕಾರಿಗಳನ್ನು ಬದಲಾಯಿಸಿರುವುದು ಗಮನಕ್ಕೆ ಬಂದಿದೆ. ಇವರು ತಕ್ಷಣ ವಿವರ ಸಲ್ಲಿಸದಿದ್ದರೆ ದಂಡಾರ್ಹ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ. ಕೆಲವು ಎನ್‌ಜಿಒಗಳು ಲಂಚ ಹಣ ಪಡೆದಿರುವ ಮಾಹಿತಿಯ ಹಿನ್ನೆಲೆಯಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸುತ್ತಿರುವ ವಿಚಾರಣೆಗೆ ಪೂರಕವಾಗಿ ಗೃಹ ಸಚಿವಾಲಯ ಈ ಆದೇಶ ಹೊರಡಿಸಿದೆ ಎಂದು ಮೂ  ಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News