ವಾರಣಾಸಿಯಂತೆ ಕೇರಳವೂ ನನಗೆ ಆಪ್ತ: ಪ್ರಧಾನಿ ಮೋದಿ

Update: 2019-06-08 13:49 GMT

ಗುರುವಾಯೂರು(ಕೇರಳ),ಜೂ.8: ವಾರಣಾಸಿಯಂತೆ ಕೇರಳವೂ ತನಗೆ ಆಪ್ತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿ ಹೇಳಿದರರು.

   ಶುಕ್ರವಾರ ತಡರಾತ್ರಿ ಕೊಚ್ಚಿಯಲ್ಲಿನ ನೌಕಾಪಡೆ ವಾಯುನೆಲೆಗೆ ಬಂದಿಳಿದಿದ್ದ ಮೋದಿ ಬಳಿಕ ಎರ್ನಾಕುಲಮ್‌ಗೆ ತೆರಳಿ ಅಲ್ಲಿ ತಂಗಿದ್ದರು. ಬೆಳಿಗ್ಗೆ ಇಲ್ಲಿಯ ಜಗತ್ಪ್ರಸಿದ್ಧ ಶ್ರೀ ಕೃಷ್ಣ ದೇಗುಲಕ್ಕೆ ಭೇಟಿ ನೀಡಿ ಕಮಲದ ಹೂವುಗಳ ತುಲಾಭಾರ ಸೇವೆಯನ್ನು ಸಲ್ಲಿಸಿದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,‘‘ ಗುರುವಾಯೂರಿನ ಈ ಪವಿತ್ರ ನೆಲಕ್ಕೆ ಮತ್ತೊಮ್ಮೆ ಬರಲು ನನಗೆ ಅವಕಾಶ ದೊರಕಿದೆ. ಇದು ಸ್ಫೂರ್ತಿಯ ಮೂಲವಾಗಿದೆ. ನಮ್ಮ ದೇಶದ ಪ್ರಜಾಪ್ರಭುತ್ವ ಸ್ವರೂಪವನ್ನು ಬಲಗೊಳಿಸಲು ಚುನಾವಣೆಯಲ್ಲಿ ಪಾಲ್ಗೊಂಡಿದ್ದ ಬೆಂಬಲಿಗರು ಮತ್ತು ಕೇರಳದ ಜನತೆಯನ್ನು ನಾನು ಶ್ಲಾಘಿಸುತ್ತೇನೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಹೆಚ್ಚು ಮುಖ್ಯವಾಗಿವೆ,ಆದರೆ ಚುನಾವಣೆಗಳ ಬಳಿಕ 130 ಕೋಟಿ ಪ್ರಜೆಗಳಿಗೆ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ಅರಿತುಕೊಳ್ಳುವುದು ಇನ್ನೂ ಹೆಚ್ಚು ಮುಖ್ಯವಾಗಿದೆ. ನಮ್ಮನ್ನು ಗೆಲ್ಲಿಸಿದವರೂ ನಮ್ಮವರೇ,ನಮ್ಮನ್ನು ಗೆಲ್ಲಿಸದಿರುವವರೂ ನಮ್ಮವರೇ. ವಾರಣಾಸಿಯಷ್ಟೇ ಕೇರಳವೂ ನನ್ನದಾಗಿದೆ ’’ಎಂದರು. ‘‘ ಕೇವಲ ಸರಕಾರ ರಚಿಸಲು ನಾವು ರಾಜಕೀಯದಲ್ಲಿಲ್ಲ. ನಾವಿಲ್ಲಿ ದೇಶದ ಜನತೆಗೆ ಸೇವೆ ಸಲ್ಲಿಸಲು ಇದ್ದೇವೆ. ಕೇರಳದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಸದೃಢಗೊಳಿಸಲು ಹಲವಾರು ಉಪಕ್ರಮಗಳನ್ನು ನಾವು ಕೈಗೊಂಡಿದ್ದೇವೆ’’ ಎಂದರು.

ಮೋದಿ ಹಿಂದೆ ಗುಜರಾತ ಮುಖ್ಯಮಂತ್ರಿಯಾಗಿದ್ದಾಗ ಗುರುವಾಯೂರಿಗೆ ಭೇಟಿ ನೀಡಿದ್ದರು. ಎರಡನೇ ಬಾರಿಗೆ ಪ್ರಧಾನಿಯಾದ ನಂತರ ಇದು ಅವರ ಮೊದಲ ಭೇಟಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News