×
Ad

ಆಂಧ್ರಪ್ರದೇಶ ನೂತನ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಅಧಿಕಾರ ಸ್ವೀಕಾರ

Update: 2019-06-08 19:25 IST

ಅಮರಾವತಿ,ಜೂ.8: ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ ರೆಡ್ಡಿ ಅವರು ಶನಿವಾರ ಬೆಳಿಗ್ಗೆ ಇಲ್ಲಿಯ ಸಚಿವಾಲಯದಲ್ಲಿ ಅಧಿಕಾರವನ್ನು ವಹಿಸಿಕೊಂಡರು. ಶುಭಮುಹೂರ್ತದಲ್ಲಿ ತನ್ನ ಕಚೇರಿಯನ್ನು ಪ್ರವೇಶಿಸಿದ ಅವರು ಸಣ್ಣ ಪ್ರಮಾಣದಲ್ಲಿ ಪೂಜೆಯನ್ನೂ ನೆರವೇರಿಸಿದರು.

ದೇವರ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದ ನಿಮ್ಮ ಆಕಾಂಕ್ಷೆಗಳನ್ನು ಈಡೇರಿಸುತ್ತೇನೆ ಮತ್ತು ನಿಮ್ಮ ನಿರೀಕ್ಷೆಗಳನ್ನು ಹುಸಿಯಾಗಿಸುವುದಿಲ್ಲ ಎಂದು ಸಚಿವಾಲಯದಲ್ಲಿ ಸಮಾವೇಶಗೊಂಡಿದ್ದ ತನ್ನ ಪಕ್ಷದ ನಾಯಕರು ಮತ್ತು ಬೆಂಬಲಿಗರನ್ನುದ್ದೇಶಿಸಿ ಅವರು ಹೇಳಿದರು.

  ಆಶಾ ಕಾರ್ಯಕರ್ತರ ವೇತನವನ್ನು ಮಾಸಿಕ 3,000 ರೂ.ಗಳಿಂದ 10,000 ರೂ.ಗೆ ಹೆಚ್ಚಿಸುವ ಕಡತಕ್ಕೆ ಸಹಿ ಹಾಕಿದ್ದು ಜಗನ್ ಅವರ ಮೊದಲ ಕರ್ತವ್ಯಗಳಲ್ಲೊಂದಾಗಿತ್ತು. ಅನಂತಪುರ ಎಕ್ಸ್‌ಪ್ರೆಸ್ ಹೆದ್ದಾರಿಗಾಗಿ ಕೇಂದ್ರದ ಅನುಮತಿ ಕೋರುವ ಮತ್ತು ಪತ್ರಕರ್ತರಿಗೆ ಆರೋಗ್ಯ ವಿಮೆ ನವೀಕರಣ ಕಡತಗಳಿಗೂ ಸಹಿ ಹಾಕಿದ ಅವರು,ಸರಕಾರಿ ನೌಕರರಿಗೆ ವೇತನದಲ್ಲಿ ಶೇ.27 ಮಧ್ಯಂತರ ಪರಿಹಾರವನ್ನೂ ಪ್ರಕಟಿಸಿದರು.

ಇದೇ ವೇಳೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಅವರು ವಿಧಾನಸಭೆಯ ಹಂಗಾಮಿ ಅಧ್ಯಕ್ಷರಾಗಿ ಹಿರಿಯ ಶಾಸಕ ಎಸ್.ವೆಂಕಟ ಚಿನ್ನಾ ಅಪ್ಪಾಲ ನಾಯ್ಡು ಅವರಿಗೆ ಮತ್ತು 25 ಶಾಸಕರಿಗೆ ಸಚಿವರಾಗಿ ಪ್ರಮಾಣ ವಚನಗಳನ್ನು ಬೋಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News