×
Ad

ಕುದ್ರೋಳಿ: ಮೃತ ಅಪರಿಚಿತ ವ್ಯಕ್ತಿಯ ರೇಖಾಚಿತ್ರ ಬಿಡುಗಡೆ

Update: 2019-06-08 20:06 IST

ಮಂಗಳೂರು, ಜೂ.8: ನಗರದ ಕುದ್ರೋಳಿ ಬಳಿಯ ಗುರುಪುರ ಹೊಳೆಯಲ್ಲಿ ಶುಕ್ರವಾರ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ಗಂಡಸಿನ ಶವದ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಕೊಲೆಯಾದ ವ್ಯಕ್ತಿ ಯಾರು, ಎಲ್ಲಿಯವರು ? ಯಾತಕ್ಕಾಗಿ, ಯಾರು ಕೊಲೆ ಮಾಡಿದರು ಎಂಬುದರ ಬಗ್ಗೆ ಯಾವೊಂದು ಮಾಹಿತಿಯೂ ಪ್ರಕರಣ ದಾಖಲಿಸಿರುವ ಬಂದರು ಪೊಲೀಸರಿಗೆ ಲಭಿಸಿಲ್ಲ. ಆದಾಗ್ಯೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅಲ್ಲದೆ ಕೊಲೆಯಾದ ವ್ಯಕ್ತಿಯ ರೇಖಾಚಿತ್ರ ಬಿಡುಗಡೆಗೊಳಿಸಿದ್ದಾರೆ.

ಕುದ್ರೋಳಿ ಸಮೀಪದ ಟಿಪ್ಪುಸುಲ್ತಾನ್ ನಗರ ಬಳಿಯ ಗುರುಪುರ ಹೊಳೆಯಲ್ಲಿ ಶುಕ್ರವಾರ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊಳೆಯಿಂದ ಮೇಲಕ್ಕೆತ್ತಿ ಪರಿಶೀಲಿಸಿದಾಗ ಎರಡು ಕೈಗಳನ್ನು ಬಟ್ಟೆಯ ತುಂಡಿನಿಂದ ಕಟ್ಟಿದ್ದಲ್ಲದೆ ಕುತ್ತಿಗೆಯನ್ನು ಬಿಗಿದಿರುವುದು ಮತ್ತು ಹೊಟ್ಟೆ ಭಾಗಕ್ಕೆ ಚೂರಿಯಿಂದ ಇರಿದು ಗಾಯಗೊಳಿಸಿರುವುದು ಕಂಡು ಬಂದಿತ್ತು. ಶವ ಬಹುತೇಕ ಕೊಳೆತು ಹೋದ ಕಾರಣ ಮುಖದ ಗುರುತು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ವಾರಸುದಾರರಿದ್ದರೆ ಗುರುತು ಪತ್ತೆಗೆ ಸಾಧ್ಯವಾಗಲು ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ.

ಕೊಲೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದವರು ಬಂದರು ಪೊಲೀಸ್ ಇನ್‌ಸ್ಪೆಕ್ಟರ್ (ಮೊ.ಸಂ: 9480805338) ಅಥವಾ ಬಂದರು ಠಾಣೆ (ದೂ.ಸಂ: 0824-220516)ನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News