×
Ad

ರೋವರ್ಸ್‌ ಚಾಲೆಂಜ್ ವಿಶ್ವ ಸ್ಪರ್ಧಾಕೂಟದಲ್ಲಿ ಮಿಂಚಿದ ಎಂಐಟಿ ತಂಡ

Update: 2019-06-08 20:27 IST

ಮಣಿಪಾಲ, ಜೂ.8: ಅಮೆರಿಕದ ಯುಟಾಹ್‌ನಲ್ಲಿ ನಡೆದ 13ನೇ ವಿಶ್ವವಿದ್ಯಾಲಯ ರೋವರ್ ಚಾಲೆಂಜ್‌ನಲ್ಲಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯ ಮಾರ್ಸ್‌ ರೋವರ್ ಮಣಿಪಾಲ (ಎಂಆರ್‌ಎಂ) ತಂಡ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ.

ಎಂಐಟಿಯ ವಿದ್ಯಾರ್ಥಿ ರೋವರ್ ವಿನ್ಯಾಸ ತಂಡ, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿಶ್ವದ 84 ತಂಡಗಳಲ್ಲಿ ಒಟ್ಟಾರೆಯಾಗಿ ಜಾಗತಿಕವಾಗಿ ಎಂಟನೇ ಸ್ಥಾನ ಪಡೆದಿದೆ. ಎಂಆರ್‌ಎಂ ತಂಡ ಭಾಗವಹಿಸಿದ ಏಷ್ಯನ್ ತಂಡಗಳಲ್ಲಿ ಅಗ್ರಸ್ಥಾನಿಯಾಗಿದ್ದಲ್ಲದೇ, ಸ್ಪರ್ಧಾಕಣದ ಅತ್ಯುತ್ತಮ ವಿಜ್ಞಾನ ತಂಡವೆನಿಸಿ ಕೊಂಡು ‘ಬರಾಂಕ ಪ್ರಶಸ್ತಿ’ಯನ್ನು ಗೆದ್ದುಕೊಂಡಿತು.

ಸತತವಾಗಿ ನಾಲ್ಕನೇ ವರ್ಷದಲ್ಲಿ ಎಂಆರ್‌ಎಂ, ರೋವರ್ ಚಾಲೆಂಜ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಗ್ರಗಣ್ಯ 36 ತಂಡಗಳಲ್ಲಿ ಒಂದೆನಿಸಿಕೊಂಡಿದೆ ಯಲ್ಲದೇ, ಯುಆರ್‌ಸಿ-19ರಲ್ಲಿ ಅಂತಿಮ ಸುತ್ತಿಗೇರಿದ ಭಾರತದ ಐದು ತಂಡಗಳಲ್ಲಿ ಒಂದೆನಿಸಿಕೊಂಡಿದೆ. ಉಳಿದಂತೆ ಭಾರತದಿಂದ ಐಐಟಿ ಮುಂಬಯಿ, ಐಐಟಿ ಮದರಾಸ್, ವಿಐಟಿ ವೆಲ್ಲೂರು ಹಾಗೂ ಎಸ್‌ಆರ್‌ಎಂ ತಂಡಗಳು ಫೈನಲ್ಸ್‌ಗೆ ಪ್ರವೇಶಿಸಿದ್ದವು.

ಯುನಿವರ್ಸಿಟಿ ರೋವರ್ ಚಾಲೆಂಜ್ (ಯುಆರ್‌ಸಿ), ವಿಶ್ವದಲ್ಲಿ ಇಂಜಿನಿಯರಿಂಗ್ ಪದವಿ ವಿದ್ಯಾರ್ಥಿಗಳಿಗೆ ರೋಬೊಟಿಕ್ ವಿಷಯದಲ್ಲಿ ನಡೆಯುವ ಪ್ರಮುಖ ಸ್ಪರ್ಧೆಯಾಗಿದೆ. ಅಮೆರಿಕದ ದಕ್ಷಿಣ ಯುಟಾಹ್ ಮರುಭೂಮಿಯಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸೇರಿಕೊಂಡು ತಯಾರಿಸಿದ ಮುಂದಿನ ಜನಾಂಗದ ಮಾರ್ಸ್‌ ರೋವರ್ಸ್‌ಗಳು ಭಾಗವಹಿಸಿದ್ದವು.

ಈ ರೋವರ್‌ಗಳನ್ನು ಮಂಗಳ ಗ್ರಹದ ಮಾದರಿಯ ಪರಿಸರದಲ್ಲಿ ನೀಡಿದ ಸವಾಲುಗಳನ್ನು ನಿಭಾಯಿಸುವ ರೀತಿಯಲ್ಲಿ ವಿನ್ಯಾಸಗೊಳಿ ಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡಗಳು ನೀಡಲಾಗುವ ನಾಲ್ಕು ಮಿಷನ್‌ಗಳನ್ನು ಪೂರ್ಣಗೊಳಿಸಬೇಕಿತ್ತು.

ಮಣಿಪಾಲ ಎಂಆರ್‌ಎಂ ತಂಡದ ನೇತೃತ್ವವನ್ನು ವಿ.ಸಾಯಿಶ್ಯಾಮ್ ಹಾಗೂ ಸಫಲ್ ಅಜ್ಮೀರ ವಹಿಸಿದ್ದು, ಅಜಯ್ ರಂಗನ್, ಸಿರಿಲ್ ತೇಜ ದುಕ್ಕಿಪಟಿ, ತುಷಾರ್ ನೆಬ್, ನಿಷೇಶ್ ಸಿಂಗ್, ಆಯ್ಯುಷ್ ಪರಾಶರ್, ಅಕಾಶ್ ಯಾದವ್, ಆನಂದಮಯಿ ಬೊಂಗಾಡೆ, ಸೋಮೇಶ್ ಪರಾಂಜಪೆ, ನೀಲ್ ದೋಶಿ, ಮುಹಮ್ಮದ್ ಮೊಹ್ಸಿನ್, ವೇದ್ ಚಿಟ್ನಿಸ್, ಅಗ್ನಿ ಸೈಕಿಯಾ, ಗೌರವ್ ಕೆ.ಎಚ್. ತನ್ಮಯ್ ಶುಕ್ಲಾ, ಎಂ.ಆದಿತ್ಯ ಶರ್ಮ, ಆದಿತ್ಯ ಕೋಲ್ಪೆ, ಲಕ್ಷ ಪಹುಜಾ, ಅನ್‌ಮೋಲ್ ಕುಮಾರ್, ಕಾರ್ತಿಕ್ ದತ್ತ, ಮಹಮ್ಮದ್ ಅಬ್ದುಲ್ ಸುಲೇಮಾನ್, ಸಾಯಿ ರಘು, ತೇಜ ದವಲುರಿ, ಶೀನಾ ಕಪೂರ್, ವೇದಾಂತ ದೋಂಗ್ಡೆ, ಕಾವ್ಯ ಬ್ಯಾನರ್ಜಿ, ಅಬಿಜಿತ್ ಅಲೋಕ್, ರಕ್ಷಿತ್ ತಿವಾರಿ, ರಚಿತಾ ಶಾ, ಸಯಂತಿಕಾ ಪೌಲ್, ಆಕಾಂಕ್ಷಾ ಕೌಶಲ್, ಅಕ್ಷತ ತುಲ್ಸಾನಿ ಮುಂತಾದವರು ಸದಸ್ಯರಾಗಿದ್ದರು.

‘ಅಂತಾರಾಷ್ಟ್ರೀಯ ಸ್ಪರ್ಧೆಯೊಂದರಲ್ಲಿ ತಂಡವನ್ನು ಮುನ್ನಡೆಸುವುದು ಅದ್ಭುತವಾದ ಅನುಭವವಾಗಿತ್ತು. ತಂಡದ ಸದಸ್ಯರ ಕಠಿಣ ಪರಿಶ್ರಮ ದಿಂದ ಯಶಸ್ಸು ಸಿಕ್ಕಿರುವುದು ತುಂಬಾ ಖುಷಿಯಾಗಿದೆ. ನಮಗಿಲ್ಲಿ ಕಲಿಯಲು ತುಂಬಾ ವಿಷಯಗಳಿದ್ದವು ಹಾಗೂ ಪ್ರತಿಯೊಬ್ಬರು ಹೆಮ್ಮೆ ಪಡುವಂತೆ ಮಾಡುವ ಬಯಕೆ ಇತ್ತು. ನಾವು ಕಲಿತ ಸಂಸ್ಥೆ ಹಾಗೂ ದೇಶವನ್ನು ಪ್ರತಿನಿಧಿಸುವ ಅನುಭವ ವರ್ಣನೆಗೆ ನಿಲುಕದ್ದು.’ ಎಂದು ಸಫಲ್ ಅಜ್ಮೀರಾ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News