ರಾಷ್ಟ್ರೀಯ ಶಿಕ್ಷಣ ನೀತಿ ಸಮಾಲೋಚನಾ ಸಭೆ
ಉಡುಪಿ, ಜೂ.8:ರಾಷ್ಟ್ರೀಯ ಶಿಕ್ಷಣ ನೀತಿ-2019ರ ಕುರಿತು ಸಮಾ ಲೋಚನಾ ಸಭೆಯನ್ನು ನಡೆಸುವ ಬಗ್ಗೆ ಪೂರ್ವಭಾವಿ ಸಭೆಯೊಂದು ಶನಿವಾರ ಉಡುಪಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಪಡಿ ನಿರ್ದೇಶಕ ರೆನ್ನಿ ಡಿಸೋಜ ಅವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2019ರ ಕರಡು ಪ್ರತಿಯನ್ನು ಕನ್ನಡ ಭಾಷೆಗೆ ಅನುವಾದಿಸಿ ಪ್ರತಿ ಸರಕಾರಿ ಶಾಲೆಗಳಿಗೆ ತಲುಪಿಸಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ರಕ್ಷಣಾ ನೀತಿ ಕುರಿತ ಸಮಾಲೋಚನೆ ಸಭೆಯನ್ನು ಜೂ.18 ರಂದು ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೇ ಜೂನ್ 30ರ ಒಳಗೆ ಸರಕಾರಿ ಇಲಾಖೆ, ಸಂಘ ಸಂಸ್ಥೆ, ಶಿಕ್ಷಣಾಸಕ್ತರು ಮತ್ತು ನಿವೃತ್ತ ಶಿಕ್ಷಕರ ಸಲಹೆಗಳನ್ನು ಕ್ರೋಢೀಕರಿಸಿ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಅದನ್ನು ಕಳುಹಿಸಲು ಸಹ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಅಧ್ಯಕ್ಷರು, ಪದಾಧಿಕಾರಿಗಳು, ಉಡುಪಿ ಜಿಲ್ಲಾ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ಮೈಸೂರು ವಿಭಾಗದ ಎಸ್‌ಡಿಎಂಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.