ಶ್ರೇಷ್ಠತೆಯ ಗುರಿ ಎಲ್ಲರದಾಗಿರಲಿ: ಬಾಲಕೃಷ್ಣ ಮದ್ದೋಡಿ
ಉಡುಪಿ, ಜೂ.8: ಪ್ರತಿಯೊಬ್ಬ ವ್ಯಕ್ತಿಯೂ ಜೀವನದ ಯಾವುದೇ ಕ್ಷೇತ್ರದಲ್ಲಿ ಮುನ್ನಡೆಯುವಾಗ ಶ್ರೇಷ್ಠತೆಯ ಹಾಗೂ ಅತ್ಯುತ್ತಮ ಸಾಧನೆಯ ಗುರಿಯೊಂದಿಗೆ ಕಠಿನ ಪರಿಶ್ರಮ, ಶ್ರದ್ಧೆ, ಛಲದೊಂದಿಗೆ ಮುಂದೆ ಸಾಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಮಣಿಪಾಲ ಎಂಐಟಿಯ ಅಸೋಸಿಯೇಟ್ ಪ್ರೊಫೆಸರ್ ಬಾಲಕೃಷ್ಣ ಮದ್ದೋಡಿ ಹೇಳಿದ್ದಾರೆ.
ಬನ್ನಂಜೆಯ ಶಿವಗಿರಿ ಹಾಲ್‌ನಲ್ಲಿ ಬಿಲ್ಲವರ ಸೇವಾ ಸಂಘ ಹಾಗೂ ಪರ್ಕಳದ ನೇತಾಜಿ ಸ್ಪೋರ್ಟ್ಸ್ ಕ್ಲಬ್‌ಗಳು ಜಂಟಿಯಾಗಿ ಸಿಇಟಿ-ನೀಟ್ ಪರೀಕ್ಷೆ ಬರೆದು ಕೌನ್ಸಿಲಿಂಗ್‌ಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಉಚಿತ ಮಾರ್ಗದರ್ಶನ ಶಿಬಿರವನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಮಂಗಳೂರು ಕೇರಿಯರ್ ಗೈಡೆನ್ಸ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಉಮರ್ ಯು.ಎಚ್. ಅವರು ನೀಟ್ ಕೌನ್ಸಿಲಿಂಗ್‌ಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪ್ರತಿ ಹೆಜ್ಜೆ ಅನುಸರಿಸಬೇಕಾದ ಕ್ರಮಗಳನ್ನು ಸಲ್ಲಿಸಬೇಕಾದ ದಾಖಲೆ ಪತ್ರಗಳ ವಿವರಗಳನ್ನು ನೀಡಿದರು.
ತಮ್ಮ ಜೀವನದ ಗುರಿಯ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ಹೊಂದಿ, ಅದನ್ನು ಸಾಧಿಸುವ ನಿಟ್ಟಿನಲ್ಲಿ ಗಮನ ಹರಿಸಿ ಎಂದು ಸಲಹೆ ನೀಡಿದ ಅವರು, ತಮ್ಮ ಇಚ್ಚೆಯ ಕೋರ್ಸ್ ಈ ಬಾರಿ ಸಿಗದೇ ಹೋದರೆ ಮತ್ತೆ ಪ್ರಯತ್ನ ಮಾಡಿ ಮುಂದಿನ ವರ್ಷದಲ್ಲೇ ಅದನ್ನು ದಕ್ಕಿಸಿಕೊಳ್ಳುವ ಪ್ರಯತ್ನ ನಡೆಸುವಂತೆ ಉಮರ್ ಸಲಹೆ ನೀಡಿದರು.
ಬಿಲ್ಲವರ ಸಂಘದ ಅಧ್ಯಕ್ಷ ನರಸಿಂಹ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಉದ್ಯಮಿ ಪ್ರಸಾದ ಶೆಟ್ಟಿ, ಮಾಹೆ ಮಣಿಪಾಲದ ಬಾಲಕೃಷ್ಣ ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನೇತಾಜಿ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಪರ್ಕಳ ಸ್ವಾಗತಿಸಿ, ರಾಘವೇಂದ್ರ ಭಟ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.