ಕ್ಷುಲ್ಲಕ ವಿಚಾರದಲ್ಲಿ ಹಲ್ಲೆ: ಇತ್ತಂಡದಿಂದ ದೂರು
ಪುತ್ತೂರು: ಇಲ್ಲಿನ 'ಪುತ್ತೂರು ಕ್ಲಬ್'ನಲ್ಲಿ ಕ್ಷುಲ್ಲಕ ವಿಚಾರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇತ್ತಂಡದವರು ದೂರು ನೀಡಿದ್ದು, ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರಿನ ಸಾಮೆತ್ತಡ್ಕ ನಿವಾಸಿ ಸದಾಶಿವ ಪೈ (55) ಎಂಬವರು ಪುತ್ತೂರು ಕ್ಲಬ್‍ನ ಅಧ್ಯಕ್ಷ ಡಾ.ದೀಪಕ್ ರೈ ಅವರ ವಿರುದ್ದ ದೂರು ನೀಡಿದ್ದಾರೆ.
ಪುತ್ತೂರು ಕ್ಲಬ್‍ನಲ್ಲಿ ಕೆಲಸ ಮಾಡುತ್ತಿರುವ ಪುತ್ತೂರು ತಾಲೂಕಿನ ನೆಲ್ಯಾಡಿ ಗ್ರಾಮದ ಬೀಡುಮಜಲು ನಿವಾಸಿ ಸುಕುಮಾರ (24) ಅವರು ಶಂಕರ ಪೈ ಮತ್ತು ಸದಾಶಿವ ಪೈ ಎಂಬವರ ವಿರುದ್ಧ ದೂರು ನೀಡಿದ್ದಾರೆ. ಪುತ್ತೂರು ನಗರ ಪೊಲೀಸರು ಈ ಇಬ್ಬರ ದೂರು ದಾಖಲಿಸಿಕೊಂಡಿದ್ದಾರೆ.
ತನ್ನ ಸಹೋದರ ಶಂಕರ ಪೈ ಅವರು ಪುತ್ತೂರು ಕ್ಲಬ್‍ನಲ್ಲಿ ಈ ಹಿಂದೆ ಆಹಾರ ಘಟಕದ ವ್ಯವಸ್ಥೆಯನ್ನು ವಹಿಸಿಕೊಂಡಿದ್ದು , ಈ ಬಾಬ್ತು ಪುತ್ತೂರು ಕ್ಲಬ್ ವತಿಯಿಂದ ಅವರಿಗೆ ಬರಬೇಕಾಗಿದ್ದ ಹಣದ ವಿಚಾರವಾಗಿ ಜೂನ್6ರಂದು ರಾತ್ರಿ ಕ್ಲಬ್‍ನ ಸದಸ್ಯರ ಮೀಟಿಂಗ್‍ಗೆ ಹೋಗಿದ್ದೆ. ಮೀಟಿಂಗ್‍ನಲ್ಲಿ ತಮ್ಮನಿಗೆ ಬರಬೇಕಾದ ಹಣದ ವಿಚಾರಕ್ಕೆ ಸಂಬಂಧಿಸಿ ಮಾತುಕತೆ ನಡೆದು ಬಾಕಿ ಹಣ ರೂ 50ಸಾವಿರ ಕೊಡುವುದಾಗಿ ತೀರ್ಮಾನವಾಗಿತ್ತು. ನಂತರ ಊಟ ಮುಗಿಸಿ ಕ್ಲಬ್‍ನ ಸದಸ್ಯರಿಗೆ ಹಾಗೂ ಅಧ್ಯಕ್ಷರಿಗೆ ಧನ್ಯವಾದ ತಿಳಿಸಲು ಹೋದಾಗ ಕ್ಲಬ್‍ನ ಅಧ್ಯಕ್ಷ ಡಾ. ದೀಪಕ್ ರೈ ಅವರು ತನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೈಯಿಂದ ಎದೆಗೆ ಹಾಗೂ ಮುಖಕ್ಕೆ ಹೊಡೆದು ದೂಡಿ ಹಾಕಿ, ಸಹೋದರನ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದರೆ ಜೀವ ಸಹಿತ ಬದುಕಲು ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿರುವುದಾಗಿ ಸದಾಶಿವ ಪೈ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಮುಂದುವರಿದ ಘಟನೆಗೆ ಸಂಬಂಧಿಸಿ ಸುಕುಮಾರ (24) ಅವರು, ಪುತ್ತೂರು ಕ್ಲಬ್ ವಿಚಾರದಲ್ಲಿ ಡಾ.ದೀಪಕ್ ರೈಯವರೊಂದಿಗಿದ್ದ ಹಳೆಯ ದ್ವೇಷದ ಹಿನ್ನಲೆಯಲ್ಲಿ ಶಂಕರ ಪೈ ಮತ್ತು ಸದಾಶಿವ ಪೈ ಅವರು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ತಾನು ಕಳೆದ 8 ತಿಂಗಳಿನಿಂದ ಪುತ್ತೂರು ಕ್ಲಬ್‍ನಲ್ಲಿ ಕೆಲಸ ಮಾಡುತ್ತಿದ್ದು, ಶುಕ್ರವಾರ ಮಧ್ಯಾಹ್ನ ಕೆಲಸ ಮುಗಿಸಿ ಬೈಕಿನಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಪುತ್ತೂರು ನಗರದ ಹೊರವಲಯದ ಮರೀಲ್ ಕ್ರಾಸ್ ಬಳಿ ಶಂಕರ್ ಪೈ ಮತ್ತು ಸದಾಶಿವ ಪೈ ಅವರು ತಡೆದು ನಿಲ್ಲಿಸಿ ಅವಾಚ್ಯ ಶಬ್ಧಗಳಿಂದ ಬೈದು ಗಾಜಿನ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಿ , ಜೀವ ಬೆದರಿಕೆಯೊಡ್ಡಿರುವುದಾಗಿ ಸುಕುಮಾರ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.