ವ್ಯಾಜ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿ: ನ್ಯಾ.ಅಬ್ದುಲ್ ನಝೀರ್
ಕುಂದಾಪುರ, ಜೂ.8:ಆರೋಗ್ಯಕರ ಸಮಾಜದಿಂದ ಮುಕ್ತ ಹಾಗೂ ಉತ್ತಮ ಜೀವನ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ವ್ಯಾಜ್ಯ ಮುಕ್ತ ಸಮಾಜವನ್ನು ನಿರ್ಮಿಸಲು ಪ್ರತಿಯೊಬ್ಬರು ಶ್ರಮಿಸಬೇಕಾಗಿದೆ ಎಂದು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಹೇಳಿದ್ದಾರೆ.
ಕುಂದಾಪುರದಲ್ಲಿ ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನ್ಯಾಯಾಲಯದ ನೂತನ ಕಟ್ಟಡಕ್ಕೆ ಶನಿವಾರ ಶಿಲಾನ್ಯಾಸ ನೇರವೇರಿಸಿ ಅವರು ಮಾತನಾಡುತಿದ್ದರು.
ಬಿಹಾರ- ಒರಿಸ್ಸಾದಂತಹ ರಾಜ್ಯಗಳ ನ್ಯಾಯಾಲಯಗಳಲ್ಲಿ ಶೇ.70ರಷ್ಟು ಕ್ರಿಮಿನಲ್ ಹಾಗೂ ಶೇ.30ರಷ್ಟು ಸಿವಿಲ್ ವ್ಯಾಜ್ಯಗಳು ಬರುತ್ತಿವೆ. ಸಿವಿಲ್ ಸಂಬಂಧಿತ ಪ್ರಕರಣಗಳು ಶೀಘ್ರವಾಗಿ ಇತ್ಯರ್ಥವಾಗದೆ ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಇತ್ಯರ್ಥವಾಗುವಂತೆ ನೋಡಿಕೊಳ್ಳ ಬೇಕಾಗಿದೆ ಎಂದು ಅವರು ತಿಳಿಸಿದರು.
ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಓಕಾ ಮಾತನಾಡಿ, ಇಂದು ಎಲ್ಲ ನ್ಯಾಯಾಲಯಗಳಲ್ಲಿ ಹಲವು ವರ್ಷಗಳಿಂದ ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಗಳು ಹೆಚ್ಚುತ್ತಿದ್ದು, ಇವುಗಳನ್ನು ಇತ್ಯರ್ಥಗೊಳಿಸುವ ಮೂಲಕ ವ್ಯಾಜ್ಯಗಳ ಹೊರೆಯನ್ನು ಇಳಿಸ ಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಆಡಳಿತಾತ್ಮಕ ವಿಭಾಗದ ನ್ಯಾಯಾಧೀಶ ಬಿ.ಎ.ಪಾಟೀಲ್ ವಹಿಸಿದ್ದರು. ರಾಜ್ಯ ಹೈಕೋರ್ಟಿನ ನ್ಯಾಯಾಧೀಶ ಬಿ. ವೀರಪ್ಪ, ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟ ರಾಜ್, ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ, ಹೆಚ್ಚು ವರಿ ಜಿಲ್ಲಾ ನ್ಯಾಯಾಧೀಶ ಪ್ರಕಾಶ್ ಖಂಡೇರಿ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಸಳ್ವಾಡಿ ನಿರಂಜನ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಹಂದೆ ಮೊದಲಾದವರು ಉಪಸ್ಥಿತರಿದ್ದರು.
ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಸ್ವಾಗತಿಸಿದರು. ಕೆ.ಸಿ.ಶೆಟ್ಟಿ ವಂದಿಸಿ ದರು. ಮಲ್ಯಾಡಿ ಜಯರಾವು ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.