×
Ad

ಚಿಕ್ಕಮಗಳೂರು ಮೂಲದ ವಿದ್ಯಾರ್ಥಿನಿಯ ಕೊಲೆ ಪ್ರಕರಣ: ಆರೋಪಿ ಸಂದೀಪ್ ರಾಥೋಡ್ ಸೆರೆ

Update: 2019-06-08 21:31 IST
ಸಂದೀಪ್ ರಾಥೋಡ್

ಮಂಗಳೂರು, ಜೂ.8: ನಗರದ ಅತ್ತಾವರದ ಬಾಡಿಗೆ ಕೋಣೆಯೊಂದರಲ್ಲಿ ಚಿಕ್ಕಮಗಳೂರು ಮೂಲದ ವಿದ್ಯಾರ್ಥಿನಿಯನ್ನು ಕೇಬಲ್ ವಯರ್ ನಿಂದ ಬಿಗಿದು ಕೊಲೆಗೈದ ಬಿಜಾಪುರ ಮೂಲದ ಆರೋಪಿಯನ್ನು ಪಾಂಡೇಶ್ವರ ಪೊಲೀಸರು ಸಿಂಧಗಿ ಪೊಲೀಸರ ಸಹಕಾರದಿಂದ ಸಿಂಧಗಿಯ ಲಾಡ್ಜ್‌ನಲ್ಲಿ ಶನಿವಾರ ಬಂಧಿಸಿದ್ದಾರೆ.

ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೆಣಕೊಟಿಗಿ ಸಮೀಪದ ಲಂಭಾಣಿ ತಾಂಡ ನಿವಾಸಿಯಾಗಿರುವ ಸಂದೀಪ್ ರಾಥೋಡ್ (24) ಬಂಧಿತ ಆರೋಪಿಯಾಗಿದ್ದು, ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ ಸಂದೀಪ್ ರಾಥೋಡ್ ಇದೀಗ ಯುವತಿಯ ಕೊಲೆ ಆರೋಪ ಎದುರಿಸಿ ಜೈಲು ಪಾಲಾಗಿರುವುದು ಗಮನಾರ್ಹವಾಗಿದೆ.

ಆರೋಪಿ ರಾಥೋಡ್ ತನ್ನ ಗೆಳತಿ ಅಂಜನಾಳನ್ನು ಶುಕ್ರವಾರ ಕೊಲೆ ಮಾಡಿದ ಬಳಿಕ ಆಕೆಯ ಮೊಬೈಲ್, ರೂಮ್ ಕೀ ಜತೆಗೆ ನಾಪತ್ತೆಯಾಗಿದ್ದ. ಪೊಲೀಸರು ಈ ಆಧಾರದಲ್ಲಿ ಶೋಧ ನಡೆಸಿದಾಗ ಶಿರಸಿ ಕಡೆಯವರೆಗಿನ ಮೊಬೈಲ್ ನೆಟ್‌ವರ್ಕ್ ತೋರಿಸಿತ್ತು. ಹಾಗಾಗಿ ಆರೋಪಿ ಸಿಂಧಗಿ ಕಡೆಗೆ ಹೋಗಿರುವುದು ಖಚಿತವಾಗಿತ್ತು. ತಕ್ಷಣ ಸಿಂಧಗಿ ಪೊಲೀಸರ ಸಹಾಯದೊಂದಿಗೆ ಆರೋಪಿಯನ್ನು ಬಂಧಿಸಲಾಗಿದೆ. ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಫೇಸ್‌ಬುಕ್‌ನಲ್ಲಿ ಪರಿಚಯ

ಅಂಜನಾ ಉಜಿರೆಯಲ್ಲಿ ಎಂಎಸ್ಸಿ ಮಾಡುತ್ತಿದ್ದಾಗ ಬಿಜಾಪುರದ ಸಂದೀಪ್ ರಾಥೋಡ್ ಜತೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿತ್ತು. ಈ ಪರಿಚಯ ಬಾಂಧವ್ಯಕ್ಕೆ ತಿರುಗಿ ಒಬ್ಬರಿಗೊಬ್ಬರು ಪ್ರೀತಿಸತೊಡಗಿದರು ಎನ್ನಲಾಗಿದೆ. ಈ ಪ್ರೀತಿಯೇ ಅಂಜನಾ ಬಾಳಿಗೆ ಮುಳ್ಳಾಯಿತು ಎಂದು ಹೇಳಲಾಗುತ್ತಿದೆ.

ಉಜಿರೆಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಮೇ 31ಕ್ಕೆ ಎಂಎಸ್ಸಿ ಪರೀಕ್ಷೆ ಮುಗಿಸಿದ್ದ ಅಂಜನಾಳಿಗೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಸಿಕ್ಕಿತ್ತು. ಆದರೆ ಅದಕ್ಕೆ ಸೇರದೆ ಅಂಜನಾ ಮತ್ತು ರಾಥೋಡ್ ಹೆಚ್ಚುವರಿ ಶಿಕ್ಷಣದ ತರಬೇತಿಗಾಗಿ ಮಂಗಳೂರಿಗೆ ಬರುವ ನಿರ್ಧಾರ ಮಾಡಿದರು ಎನ್ನಲಾಗಿದೆ. ಅದರಂತೆ ಅಂಜನಾ ಬ್ಯಾಂಕಿಂಗ್ ತರಬೇತಿಗಾಗಿ ಮಂಗಳೂರಿಗೆ ಆಗಮಿಸಿದರೆ ಸಂದೀಪ್ ರಾಥೋಡ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಪರೀಕ್ಷೆಗೆ ತರಬೇತಿ ಪಡೆಯಲು ಬಂದಿದ್ದ. ಪರಸ್ಪರ ಪ್ರೀತಿಸುತ್ತಿದ್ದ ಇವರು ಮಂಗಳೂರಿಗೆ ಬರುವ ಮುಂಚೆನೇ ಒಂದೇ ರೂಮಿನಲ್ಲಿ ವಾಸಿಸುವ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. ಜೂ. 2ರಂದು ಈ ಮನೆಯಲ್ಲಿ ಬಾಡಿಗೆ ಕೋಣೆ ಹಿಡಿದಿದ್ದರು. ಅಲ್ಲದೆ ತಾವು ಪತಿ ಮತ್ತು ಪತ್ನಿ ಎಂದು ಪರಿಚಯಿಸಿಕೊಂಡು ಮನೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ತಾಯಿ ಆಸ್ಪತ್ರೆಗೆ ದಾಖಲು

ಮಗಳು ಅಂಜನಾ ಮೃತಪಟ್ಟ ಶಾಕ್‌ನಿಂದ ಆಕೆಯ ತಾಯಿ ರಕ್ತದೊತ್ತಡಕ್ಕೆ ಒಳಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ ಮಧ್ಯಾಹ್ನ ಮೃತದೇಹದ ಮಹಜರು ನಡೆಸಿ ಆಕೆಯ ತಂದೆಗೆ ಬಿಟ್ಟುಕೊಡಲಾಯಿತು.

ಆಧಾರ್ ಕಾರ್ಡ್ ನೀಡಿದ ಸುಳಿವು

ಶುಕ್ರವಾರ ಕೊಲೆಯಾದ ಅಂಜನಾ ಬಳಿ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಅದರಲ್ಲಿ ಅವರ ಮನೆಯ ವಿಳಾಸ ಸಿಕ್ಕಿದೆ. ಆಧಾರ್ ಕಾರ್ಡ್ ನಂಬರ್ ಆಧಾರದಲ್ಲಿ ಶೋಧ ನಡೆಸಿದಾಗ ಅಂಜನಾ ತಾಯಿಯ ಮೊಬೈಲ್ ನಂಬರ್ ಸಿಕ್ಕಿದೆ. ಆ ಮೊಬೈಲ್‌ಗೆ ಕರೆ ಮಾಡಿ ವಿವರ ಕೇಳಿದಾಗ ‘ನಾವು ಮಂಗಳೂರಿನಲ್ಲಿದ್ದೇವೆ. ಅಂಜನಾ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಆಕೆ ನಾಪತ್ತೆಯಾದ ಕಾರಣ ಆಕೆಯ ತಂದೆ ಬರ್ಕೆ ಠಾಣೆಗೆ ದೂರು ನೀಡಲು ಹೋಗಿದ್ದಾರೆ’ ಎಂದು ಹೇಳಿದ್ದರು.

ಏಕೈಕ ಮಗಳು

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಮಂಜುನಾಥ ವೈ.ಎನ್.ಎಂಬವರ ಏಕೈಕ ಪುತ್ರಿಯಾಗಿರುವ ಅಂಜನಾ ವಶಿಷ್ಟ (22) ಗುರುವಾರ ಸಂಜೆ ಮಂಗಳೂರಿಗೆ ಬಂದಿದ್ದಳು. ಈಕೆಯನ್ನು ಮಂಜುನಾಥ್ ಸ್ವತಃ ಚಿಕ್ಕಮಗಳೂರಿನಲ್ಲಿ ಬಸ್ ಹತ್ತಿಸಿದ್ದರು ಎನ್ನಲಾಗಿದೆ. ಮಂಗಳೂರಿಗೆ ಬಂದು ಮುಟ್ಟಿರುವ ಬಗ್ಗೆ ಈಕೆ ತನ್ನ ತಂದೆಯ ಗಮನಕ್ಕೆ ತಂದಿದ್ದಳಲ್ಲದೆ ಮಂಗಳೂರಿನಲ್ಲಿ ಬಾಡಿಗೆ ಕೋಣೆ ಹಿಡಿದು ವಾಸವಾಗುವುದಾಗಿ ತಿಳಿಸಿದ್ದಳು.

ಅದರಂತೆ ಮಂಜುನಾಥ್ ಮಗಳು ಅಂಜನಾಳ ಬಟ್ಟೆಬರೆಯೊಂದಿಗೆ ಶುಕ್ರವಾರ ಬೆಳಗ್ಗೆ ಮಂಗಳೂರಿಗೆ ಬಂದಿದ್ದರು. ಆದರೆ ಮಗಳ ಮೊಬೈಲ್ ನೆಟ್‌ವರ್ಕ್ ತೋರಿಸದ ಕಾರಣ ಆತಂಕಗೊಂಡು ಬರ್ಕೆ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಈ ಮಧ್ಯೆ ಶುಕ್ರವಾರ ಸಂಜೆ ಅತ್ತಾವರದ ಮನೆಯೊಂದರ ಬಾಡಿಗೆ ಕೋಣೆಯಲ್ಲಿ ಯುವತಿಯ ಮೃತದೇಹ ಕಂಡು ಬಂದ ಮೇರೆಗೆ ಮತ್ತು ಅಲ್ಲಿ ಲಭ್ಯವಾದ ಆಧಾರ್ ಕಾರ್ಡ್‌ನ ಆಧಾರದ ಮೇಲೆ ಅಂಜನಾಳ ಕೊಲೆಯಾಗಿರುವುದನ್ನು ಪೊಲೀಸರು ದೃಢಪಡಿಸಿದರು. ಅಲ್ಲದೆ ಅಂಜನಾಳ ತಂದೆ ಮಂಜುನಾಥ್ ಕೂಡ ಮಗಳ ಮೃತದೇಹವನ್ನು ಗುರುತಿಸಿದ್ದರು.

ಬಿಜಾಪುರ ಜಿಲ್ಲಾ ಪೊಲೀಸರ ಸಹಕಾರದಿಂದ ಸಿಂಧಗಿಯ ಲಾಡ್ಜ್‌ನಲ್ಲಿ ಆರೋಪಿಯನ್ನು ಬಂಧಿಸಲಾಯಿತು. ಆರೋಪಿಯು ನಗರದ ಕೋಚಿಂಗ್ ಸೆಂಟರ್‌ನಲ್ಲಿ ಜೂ.2ರಂದು ದಾಖಲಾತಿ ಪಡೆದಿದ್ದ. ಅವನೊಂದಿಗೆ ಅಂಜನಾ ಕೂಡ ಇದ್ದಳು. ಅತ್ತಾವರದ ಮನೆಯೊಂದರಲ್ಲಿ ಬಾಡಿಗೆ ಕೋಣೆ ಹಿಡಿಯುವಾಗ ಆರೋಪಿಯು ಮನೆ ಮಾಲಕನಿಗೆ ಸೂಕ್ತ ದಾಖಲೆ ನೀಡದೆ ತಾನು ಪೊಲೀಸ್ ಎಂದು ನಂಬಿಸಿದ್ದ. ಇಬ್ಬರಿಗೂ ಮದುವೆಯ ವಿಚಾರದಲ್ಲಿ ಗಲಾಟೆ ನಡೆದಿತ್ತು. ಅಂಜನಾ ರಾಥೋಡ್‌ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಆರೋಪಿಯು ಕೋಣೆಯಲ್ಲಿದ್ದ ಕೇಬಲನ್ನು ಆಕೆಯ ಕುತ್ತಿಗೆಗೆ ಬಿಗಿದಿದ್ದರಿಂದ ಆಕೆ ಕೊನೆಯುಸಿರೆಳೆದಿದ್ದಾಳೆ. ಪ್ರಕರಣ ತನಿಖೆಯಲ್ಲಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಡಿಸಿಪಿ ಹನುಮಂತರಾಯ ತಿಳಿಸಿದ್ದಾರೆ.

ಅಲ್ಲದೆ ಯಾರೂ ಕೂಡಾ ಪೂರ್ವಾಪರ ವಿಚಾರಣೆ ಮಾಡದೆ ಮತ್ತು ಸೂಕ್ತ ಗುರುತು ದಾಖಲೆಪತ್ರ ಪಡೆಯದೆ ಮನೆಯ ಕೋಣೆಯನ್ನು ಬಾಡಿಗೆಗೆ ಅಥವಾ ಲೀಸ್‌ಗೆ ನೀಡಬಾರದು ಎಂದು ಹನುಮಂತರಾಯ ಮನವಿ ಮಾಡಿದ್ದಾರೆ.

ಅಂಜನಾ-ರಾಥೋಡ್ ಮದುವೆಯಾಗಿತ್ತೇ ?

ಮಂಗಳೂರಿಗೆ ಬಂದ ಬಳಿಕ ಜೂ.2ರಂದು ಅತ್ತಾವರ ಲೂಯಿಸ್ ಎಂಬವರ ಮನೆಗೆ ಹೋಗಿ ‘ನಾವಿಬ್ಬರು ಮದುವೆಯಾಗಿದ್ದೇವೆ’ ಎಂದು ಸುಳ್ಳು ಹೇಳಿ ರೂಮು ಪಡೆದಿದ್ದರು. ಶನಿವಾರ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತನಿಂದ ಅಂಜನಾಳ ಮೊಬೈಲ್, ಕರಿಮಣಿ ತಾಳಿ, ಬಾಡಿಗೆ ಕೊಠಡಿ ಕೀ ವಶಪಡಿಸಿಕೊಳ್ಳಲಾಗಿದೆ. ಸಿಂಧಗಿ ಪೊಲೀಸರ ಬಳಿ ಆರೋಪಿ ‘ತಾನು ಅಂಜನಾ ಮದುವೆಯಾಗಿದ್ದೇನೆಂದು’ ಹೇಳಿದ್ದಾನೆಂದು ಮೂಲಗಳು ತಿಳಿಸಿವೆ.

ಹೊಸ ಸಂಬಂಧಕ್ಕೆ ಒಲವು

ರಾಥೋಡ್ ಆರ್ಥಿಕವಾಗಿ ಅಷ್ಟೇನೂ ಶಕ್ತಿವಂತನಾಗಿರಲಿಲ್ಲ ಮತ್ತು ಯಾವುದೇ ಉದ್ಯೋಗವೂ ಸಿಕ್ಕಿರಲಿಲ್ಲ. ಏನೇನೋ ಸುಳ್ಳು ಹೇಳಿ ಅಂಜನಾಳನ್ನು ಪ್ರೀತಿಸಿದ್ದ ಎನ್ನಲಾಗಿದೆ. ಅಂಜನಾಳ ತಂದೆ ಮಗಳ ಮದುವೆಗೆ ಹೊಸ ಸಂಬಂಧ ನೋಡಿ ಮಾತುಕತೆ ನಡೆಸಿದ್ದು ಅದು ಅಂತಿಮ ಹಂತದಲ್ಲಿತ್ತು. ಹುಡುಗ ಮತ್ತು ಹೊಸ ಸಂಬಂಧ ಬಗ್ಗೆ ಅಂಜನಾಳಿಗೂ ಒಲವಿತ್ತು. ಈ ಬಗ್ಗೆ ಅಂತಿಮ ಮಾತುಕತೆ ನಡೆಸಲು ರಾಥೋಡ್ ರೂಮಿಗೆ ಬಂದಿದ್ದಳು. ಆದರೆ ಅಲ್ಲಿಗೆ ಮಾತಿಗೆ ಮಾತು ಬೆಳೆದು ಕೊಲೆಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News