ಕಾರ್ಯಕರ್ತರ ಮೇಲೆ ಬೈಂದೂರು ಶಾಸಕರಿಂದ ಹಲ್ಲೆ : ಆರೋಪ

Update: 2019-06-08 17:59 GMT

ಕುಂದಾಪುರ, ಜೂ.8: ಬಾರ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜಿಮಾತು ಕತೆಗೆ ಮನೆಗೆ ಕರೆದ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ತಮ್ಮದೇ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದು, ಈ ಸಂಬಂಧ ವಾಗ್ವಾದ ನಡೆಯುವ ವೀಡಿಯೊ ಸಾವಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಂಟ ಸಮುದಾಯದ ಇಬ್ಬರ ನಡುವೆ ಉಂಟಾದ ತಕರಾರಿಗೆ ಸಂಬಂಧಿಸಿ ಹಲ್ಲೆ ನಡೆದಿದ್ದು, ಇದನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲು ಮಾತುಕತೆಗಾಗಿ ಎರಡೂ ತಂಡಗಳನ್ನು ಶಾಸಕರು ಶುಕ್ರವಾರ ಸಂಜೆ ನೆಂಪುವಿನಲ್ಲಿರುವ ತಮ್ಮ ನಿವಾಸಕ್ಕೆ ಕರೆದಿದ್ದರು. ಮಾತುಕತೆ ನಡೆಸುತ್ತಿರುವಾಗ ಸುಕುಮಾರ ಶೆಟ್ಟಿ ಬೆಂಬಲಿಗರು ಏಕಾಏಕಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾಗಿದ್ದಾರು ಎಂದು ದೂರಲಾಗಿದೆ.

ಈ ವೇಳೆ ಹಲ್ಲೆ, ಮಾತಿನ ಚಕಮಕಿ ನಡೆದಿದ್ದು, ಇದೀಗ ಬಿಜೆಪಿ ಕಾರ್ಯಕರ್ತರೇ ಶಾಸಕ ಸುಕುಮಾರ ಶೆಟ್ಟಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ನಂತರ ಶಾಸಕರ ಮನೆಯ ಎದುರು ಜಮಾಯಿಸಿದ ಕಾರ್ಯಕರ್ತರು ಶಾಸಕರ ಏಕಪಕ್ಷೀಯ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆಯಲ್ಲಿ ಶಾಸಕ ಸುಕುಮಾರ್ ಶೆಟ್ಟಿ ಹಾಗೂ ಕಾರ್ಯಕರ್ತರ ನಡುವೆ ನಡೆದ ವಾಗ್ವಾದದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ಶಾಸಕರ ಮನೆಯಲ್ಲಿ ಯಾರ ಮೇಲೂ ಹಲ್ಲೆ ನಡೆದಿಲ್ಲ. ಪ್ರಕರಣವೊಂದರ ರಾಜಿ ಇತ್ಯರ್ಥದ ವೇಳೆ ಎರಡು ತಂಡಗಳ ಮಧ್ಯೆ ವಾಗ್ವಾದ ನಡೆದಿತ್ತು. ಕೂಡಲೇ ಶಾಸಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಕಾರ್ಯಕರ್ತರ ಮೇಲಿನ ಹಲ್ಲೆ ಆರೋಪ ಸತ್ಯಕ್ಕೆ ದೂರವಾದುದು. ಇದು ಪಕ್ಷದೊಳಗೆ ಅಸಮಾಧಾನವಿರುವ ಕೆಲವೊಬ್ಬರು ಮಾಡಿರುವ ಅಪ್ರಚಾರವಾಗಿದೆ’ ಎಂದು ಬೈಂದೂರು ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News