ಪುದು ಗ್ರಾಪಂ ಸದಸ್ಯ ರಿಯಾಝ್ ಕೊಲೆಯತ್ನ ಪ್ರಕರಣ: ಮೂರು ಪೊಲೀಸ್ ತಂಡ ರಚನೆ

Update: 2019-06-08 16:11 GMT

ಮಲ್ಪೆ, ಜೂ.8: ಬಂಟ್ವಾಳ ತಾಲೂಕಿನ ಪುದು ಗ್ರಾಪಂ ಸದಸ್ಯ ಹಾಗೂ ಮೀನಿನ ವ್ಯಾಪಾರಿ ಕೆ. ಮುಹಮ್ಮದ್ ರಿಯಾಝ್ (34) ಕೊಲೆಯತ್ನ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಿದ್ದಾರೆ.

ಉಡುಪಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಕಿರಣ್, ಕಾಪು ವೃತ್ತ ನಿರೀಕ್ಷಕ ಶಾಂತಾರಾಮ ಹಾಗೂ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಈಗಾಗಲೇ ಒಂದು ತಂಡ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದರೆ, ಉಳಿದ ಎರಡು ತಂಡ ಹೊರ ಜಿಲ್ಲೆಗೆ ತೆರಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸಂಬಂಧ ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಕೃತ್ಯಕ್ಕೆ ಬಳಸಿದ ಕಾರಿನ ನಂಬರಿನ ಪತ್ತೆಗಾಗಿ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಯಲ್ಲಿನ ಸಿಸಿಟಿವಿ ಗಳ ಪರಿಶೀಲನೆಯಲ್ಲಿ ತೊಡಗಿಸಿದ್ದಾರೆ. ಇದೊಂದು ವೈಯಕ್ತಿಕ ದ್ವೇಷದಿಂದ ನಡೆದಿರುವ ಕೃತ್ಯ ಎಂಬುದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ. ಈವರೆಗೆ ಯಾರನ್ನು ಕೂಡ ವಶಕ್ಕೆ ತೆಗೆದುಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಲ್ಪೆ ಬಂದರಿಗೆ ಮೀನಿನ ವ್ಯಾಪಾರಕ್ಕೆ ಜೂ.7ರಂದು ಇತರ ಮೂವ ರೊಂದಿಗೆ ಬಂದಿದ್ದ ರಿಯಾಝ್ ಮೇಲೆ ನಾಲ್ವರು ದುಷ್ಕರ್ಮಿಗಳು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದರು. ರಿಯಾಝ್ ಇದೀಗ ಮಣಿಪಾಲ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News