ಶಿಕ್ಷಣಕ್ಕೆ ಪ್ರೋತ್ಸಾಹ ಸಮಾಜದ ಬಹುದೊಡ್ಡ ಕೊಡುಗೆ : ನ್ಯಾ. ಮೂ. ವಿಶ್ವನಾಥ ಶೆಟ್ಟಿ

Update: 2019-06-08 16:28 GMT

ಬೆಳ್ತಂಗಡಿ : ‘ಉತ್ತಮ ವಾತಾವರಣದಿಂದ ಮಾತ್ರ ಮಗುವಿನ ಜ್ಞಾನ ಮತ್ತು ತಿಳಿವಳಿಕೆ ವೃದ್ಧಿ ಸಾಧ್ಯ. ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತು ಸಮಾಜಕ್ಕೆ ಆರೋಗ್ಯ ಸೇವೆಯನ್ನು ನೀಡಿದಾಗ ಸರ್ಕಾರಕ್ಕೆ ಸಹಕಾರ ಮಾಡಿದಂತಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಇಂತಹ ಕಾರ್ಯ ಸಮಾಜಕ್ಕೆ ಸ್ಫೂರ್ತಿದಾಯಕವಾದದ್ದು’ ಎಂದು ಕರ್ನಾಟಕ ಲೋಕಾಯುಕ್ತ ನ್ಯಾ.ಮೂ. ಪಿ. ವಿಶ್ವನಾಥ ಶೆಟ್ಟಿ ಹೇಳಿದರು.

ಅವರು ಶನಿವಾರ ಅಳದಂಗಡಿ ಸೋಮನಾಥೇಶ್ವರ ದೇವಸ್ಥಾನದ ರಾಜಾಂಗಣದಲ್ಲಿ ನಡೆದ  ಅಳದಂಗಡಿ ಶ್ರೀ ಸತ್ಯದೇವತಾ (ಕಲ್ಲುರ್ಟಿ) ದೈವಸ್ಥಾನ ಸನ್ನಿದಿಯಿಂದ ನಡೆದ 15ನೇ ವರ್ಷದ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಭಾರತೀಯ ಸೇನಾ ಯೋಧರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ಯುವ ಸಮುದಾಯವನ್ನು ಸರಿದಾರಿಯಲ್ಲಿ ಕೊಡೊಯ್ದಾಗ ಸಮಾಜ ಉತ್ತಮವಾಗಿ ಬೆಳೆಯುತ್ತದೆ. ಸಮಾಜದ ಮೇಲೆ ಯಾರಿಗೆ ಕಳಕಳಿಯಿದೆಯೋ ಅವರಿಗೆ ಎಳೆಯ ಮಕ್ಕಳನ್ನು ಸರಿ ದಾರಿಯಲ್ಲಿ ಕೊಡೊಯ್ಯುವ ಜವಾಬ್ಧಾರಿಯೂ ಇದೆ. ಸಾರ್ವಜನಿಕರಿಂದ ಬಂದ ದುಡ್ಡನ್ನು ಸಾರ್ವಜನಿಕರಿಗೆ ವಿನಿಯೋಗಿಸುವ ಕೆಲಸ ಅಳದಂಗಡಿಯ ಸತ್ಯದೇವತಾ ಸನ್ನಿದಿಯಿಂದ ನಡೆಯುತ್ತಿರುವುದು ಶ್ಲಾಘನೀಯ. ಧರ್ಮಕ್ಷೇತ್ರಗಳು ಇಂತಹ ಪರಮ ಪವಿತ್ರವಾದ ಕೆಲಸವನ್ನು ಮಾಡಿದಾಗ ಪ್ರತಿಯೊಬ್ಬರ ಬಾಳು ಬೆಳಗುವುದು ಎಂದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದ ಕರ್ನಾಟಕ ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಜಸ್ಟಿಸ್ ಅಜಿತ್ ಜೆ. ಗುಂಜಾಲ್ ಮಾತನಾಡಿ,  ‘ವಿದ್ಯೆಯು ಪರಮಶ್ರೇಷ್ಠವಾದ ಸಂಪತ್ತಾಗಿದೆ. ವಿದ್ಯೆಯನ್ನು ಯಾರೂ ಕದಿಯಲು ಸಾಧ್ಯವಿಲ್ಲ. ವಿದ್ಯೆಗಾಗಿ ನೆರವಾಗುವ ಕಾರ್ಯದಿಂದ ಎಷ್ಟೋ ಕುಟುಂಬವನ್ನು ಬೆಳಗುವ ಶ್ರೇಷ್ಠ ಕಾರ್ಯವಾಗುವುದು’ ಎಂದರು.

ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ. ಪದ್ಮಪ್ರಸಾದ್ ಅಜಿಲ ವಹಿಸಿದ್ದರು.

ವೇದಿಕೆಯಲ್ಲಿ ಬೆಂಗಳೂರು ತುಳುಕೂಟದ ಅಧ್ಯಕ್ಷ ದಿನೇಶ್ ಹೆಗ್ಡೆ, ಬೆಂಗಳೂರಿನ ಉದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಅಳದಂಗಡಿ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಮಾರ್ ಮಿತ್ತಮಾರ್, ತಾಲೂಕು ಪಂಚಾಯಿತಿ ಸದಸ್ಯ ಸುಧೀರ್ ಆರ್ ಸುವರ್ಣ ಇದ್ದರು. ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಹಾಗೂ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಅಜಿತ್ ಜೆ ಗುಂಜಾಲ್ ಭಾರತೀಯ ಸೇನಾ ಯೋಧರಾದ ಹರ್ಷಿತ್ ಕೆ, ಹರೀಶ್ಚಂದ್ರ, ಮೋಹನ ಕುಲಾಲ್,ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಜ್ಯೋತಿಕಾ ಎಸ್  ಇವರನ್ನು ಸನ್ಮಾನಿಸಲಾಯಿತು.

ಸುಮಾರು 5 ಸಾವಿರ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ ಅಜಿಲ ಸ್ವಾಗತಿಸಿದರು. ಎ. ಮೋಹನದಾಸ್ ಧನ್ಯವಾದವಿತ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News