ಕಥುವಾ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ ಪ್ರಕಟ

Update: 2019-06-10 15:23 GMT

ಪಠಾಣಕೋಟ್(ಪಂಜಾಬ್),ಜೂ.10: ದೇಶವನ್ನೇ ನಡುಗಿಸಿದ್ದ ಜಮ್ಮು-ಕಾಶ್ಮೀರದ ಕಥುವಾದಲ್ಲಿ ನಡೆದಿದ್ದ ಎಂಟರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತೀರ್ಪನ್ನು ಪಠಾಣಕೋಟ್ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸೋಮವಾರ ಪ್ರಕಟಿಸಿದೆ. ಏಳು ಆರೋಪಿಗಳ ಪೈಕಿ ಆರು ಜನರನ್ನು ದೋಷಿಗಳೆಂದು ಘೋಷಿಸಿರುವ ನ್ಯಾಯಾಲಯವು ಇನ್ನೋರ್ವ ಆರೋಪಿಯನ್ನು ಖುಲಾಸೆಗೊಳಿಸಿದೆ. ಮೂವರು ದೋಷಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ಇತರ ಮೂವರಿಗೆ ತಲಾ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

 ಗ್ರಾಮದ ದೇವಸ್ಥಾನದ ಮೇಲ್ವಿಚಾರಕ ಸಾಂಜಿರಾಮ,ವಿಶೇಷ ಪೊಲೀಸ್ ಅಧಿಕಾರಿ ದೀಪಕ ಖಜುರಿಯಾ ಮತ್ತು ಇನ್ನೋರ್ವ ಆರೋಪಿ ಪರ್ವೇಶ ಕುಮಾರ್ ವಿರುದ್ಧ ರಣಬೀರ್ ದಂಡ ಸಂಹಿತೆಯಡಿ ಕೊಲೆ,ಸಾಮೂಹಿಕ ಅತ್ಯಾಚಾರ ಮತ್ತು ಕ್ರಿಮಿನಲ್ ಒಳಸಂಚು ಆರೋಪಗಳು ರುಜುವಾತುಗೊಂಡಿರುವ ಹಿನ್ನೆಲೆಯಲ್ಲಿ ನ್ಯಾ.ತೇಜ್ವಿಂದರ್ ಸಿಂಗ್ ಅವರು ಮೂವರಿಗೂ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದರು. ಮೂವರೂ ದೋಷಿಗಳಿಗೆ ಸಾಮೂಹಿಕ ಅತ್ಯಾಚಾರದ ಆರೋಪಗಳಡಿ ತಲಾ 25 ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದ್ದು,ಎಲ್ಲ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕಿದೆ.

 ಸಾಕ್ಷ್ಯಾನಾಶದ ಆರೋಪ ಹೊತ್ತಿದ್ದ ಇತರ ಮೂವರು ದೋಷಿಗಳಾದ ಸಬ್-ಇನ್‌ಸ್ಪೆಕ್ಟರ್ ಆನಂದ ದತ್ತಾ,ಹೆಡ್ ಕಾನ್‌ಸ್ಟೇಬಲ್ ತಿಲಕ ರಾಜ್ ಮತ್ತು ವಿಶೇಷ ಪೊಲೀಸ್ ಅಧಿಕಾರಿ ಸುರೇಂದ್ರ ವರ್ಮಾ ಅವರಿಗೆ ತಲಾ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ನ್ಯಾಯಾಲಯವು ಏಳನೇ ಆರೋಪಿಯಾಗಿದ್ದ ಪ್ರಮುಖ ದೋಷಿ ಸಾಂಜಿರಾಮನ ಪುತ್ರ ವಿಶಾಲ್ ಜಂಗೋತ್ರಾಗೆ ಸಂಶಯದ ಲಾಭ ನೀಡಿ ಖುಲಾಸೆಗೊಳಿಸಿದೆ. ಸಾಂಜಿರಾಮನ ಸೋದರಳಿಯನಾಗಿರುವ ಪ್ರಕರಣದಲ್ಲಿಯ ಬಾಲಾಪರಾಧಿಯ ವಯಸ್ಸನ್ನು ನಿರ್ಧರಿಸುವ ಕುರಿತು ಅರ್ಜಿಯ ವಿಚಾರಣೆ ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವದರಿಂದ ಆತನ ವಿಚಾರಣೆಯು ಇನ್ನಷ್ಟೇ ಆರಂಭಗೊಳ್ಳಬೇಕಿದೆ.

ಆರು ಜನರ ದೋಷನಿರ್ಣಯದ ವಿರುದ್ಧ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸುವುದಾಗಿ ಆರೋಪಿ ಪರ ವಕೀಲ ಎಸ್.ಕೆ.ಸಾವ್ನಿ ತಿಳಿಸಿದರು.

ಜಮ್ಮು-ಕಾಶ್ಮೀರ ಪೊಲೀಸರು ಸಲ್ಲ್ಲಿಸಿದ ದೋಷಾರೋಪಣಾ ಪಟ್ಟಿಯಂತೆ 2018,ಜ.10ರಂದು ಕಥುವಾ ಜಿಲ್ಲೆಯ ಗ್ರಾಮದ ಮುಸ್ಲಿಂ ಅಲೆಮಾರಿ ಸಮುದಾಯಕ್ಕೆ ಸೇರಿದ್ದ ಎಂಟರ ಹರೆಯದ ಬಾಲಕಿಯನ್ನು ಆಕೆ ಕುದುರೆಗಳನ್ನು ಮೇಯಿಸಲು ತೆರಳಿದ್ದಾಗ ಅಪಹರಿಸಲಾಗಿತ್ತು ಮತ್ತು ಸಾಂಜಿರಾಮನ ಉಸ್ತುವಾರಿಯಲ್ಲಿದ್ದ ಗ್ರಾಮದ ದೇವಸ್ಥಾನದಲ್ಲಿ ದಿಗ್ಬಂಧನದಲ್ಲಿರಿಸಲಾಗಿತ್ತು. ಆರೋಪಿಗಳು ಆಕೆಗೆ ಮತ್ತು ಬರಿಸುವ ಔಷಧಿಗಳನ್ನು ನೀಡಿ ನಾಲ್ಕು ದಿನಗಳ ಕಾಲ ಹಲವಾರು ಬಾರಿ ಅತ್ಯಾಚಾರವೆಸಗಿದ್ದರು. ನಂತರ ಬಾಲಕಿಯನ್ನು ಕೊಂದು ಶವವನ್ನು ಗ್ರಾಮದ ಹೊರಗೆ ಪೊದೆಯಲ್ಲಿ ಎಸೆದಿದ್ದರು. ಬಾಲಾಪರಾಧಿಯು ಕುದುರೆಗಳನ್ನು ಹುಡುಕಲು ನೆರವಾಗುವ ನೆಪದಲ್ಲಿ ಬಾಲಕಿಯನ್ನು ಅಪಹರಿಸಿದ್ದ.

ಕಥುವಾ ಪ್ರದೇಶದಿಂದ ಬಖೇರವಾಲ್ ಮುಸ್ಲಿಂ(ಗುಜ್ಜರ್-ಬಖೇರವಾಲ್) ಅಲೆಮಾರಿ ಸಮುದಾಯವನ್ನು ಒಕ್ಕಲೆಬ್ಬಿಸಲು ಈ ನತದೃಷ್ಟ ಬಾಲಕಿಯನ್ನು ದಾಳವನ್ನಾಗಿ ಬಳಸಿಕೊಳ್ಳಲಾಗಿತ್ತು ಎಂದೂ ದೋಷಾರೋಪಣ ಪಟ್ಟಿಯಲ್ಲಿ ಹೇಳಲಾಗಿತ್ತು.

 ಜಮ್ಮು-ಕಾಶ್ಮೀರ ಪೊಲೀಸರು ಕಥುವಾ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸುವುದಕ್ಕೆ ಸ್ಥಳೀಯ ವಕೀಲರು ತಡೆಯೊಡ್ಡಿದ ಬಳಿಕ ಸರ್ವೋಚ್ಚ ನ್ಯಾಯಾಲಯದ ನಿರ್ದೇಶದಂತೆ ಕಳೆದ ವರ್ಷದ ಮೇ ತಿಂಗಳಲ್ಲಿ ಪ್ರಕರಣವನ್ನು ಪಠಾಣಕೋಟ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು ಮತ್ತು ಬಂಧಿತ ಆರೋಪಿಗಳನ್ನು ಪಂಜಾಬಿನ ಗುರುದಾಸಪುರ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಕಳೆದೊಂದು ವರ್ಷದಿಂದಲೂ ದೈನಂದಿನ ಆಧಾರದಲ್ಲಿ ಪ್ರಕರಣದ ಗುಪ್ತ ವಿಚಾರಣೆ ನಡೆಸುತ್ತಿದ್ದು,ಪ್ರಾಸಿಕ್ಯೂಷನ್ ಮತ್ತು ಆರೋಪಿ ಪರ ವಕೀಲರು ಕಳೆದ ವಾರ ತಮ್ಮ ಅಂತಿಮ ವಾದಗಳನ್ನು ಪೂರ್ಣಗೊಳಿಸಿದ್ದರು.

 ಆರೋಪಿಗಳ ಬಂಧನವನ್ನು ವಿರೋಧಿಸಿ ಕಥುವಾದಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು ಮತ್ತು ಜಮ್ಮು-ಕಾಶ್ಮೀರ ಪೊಲೀಸರ ತನಿಖಾ ವರದಿಯ ಕುರಿತಂತೆ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News