ತನ್ನದೇ ‘ಶವಸಂಸ್ಕಾರ’ದ ಪ್ರತಿಭಟನೆ ಬಗ್ಗೆ ಖುಷಿ ಪಟ್ಟಿದ್ದ ಕಾರ್ನಾಡ್ !
ಉಡುಪಿ, ಜೂ.9: ‘ನನ್ನ ಶವ ಸಂಸ್ಕಾರದ ಪ್ರತಿಭಟನೆಯನ್ನು ನಾನು ಅಲ್ಲಿದ್ದು ನೋಡಬೇಕಿತ್ತು. ನಾನು ತುಂಬಾ ಏಂಜಾಯ್ ಮಾಡುತ್ತಿದ್ದೆ’ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ 2004ರ ಫೆ.22ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ಆವರಣದಲ್ಲಿ ನಡೆದ ಪ್ರೀತಿ ಬೆಳೆಸಿ ದೇಶ ಉಳಿಸಿ ಉಡುಪಿ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಿದ್ದ ಗಿರೀಶ್ ಕಾರ್ನಾಡ್, ನಂತರ ಈ ಮಾತನ್ನು ಹಿರಿಯ ಚಿಂತಕ ಜಿ.ರಾಜ ಶೇಖರ್ ಅವರಲ್ಲಿ ಹೇಳಿದ್ದರು.
ಈ ಘಟನೆಯನ್ನು ಸ್ಮರಿಸಿಕೊಂಡ ರಾಜಶೇಖರ್, ಸಂಘಪರಿವಾರದ ವಿರುದ್ಧ ಸೆಟೆದು ನಿಂತು ಬಾಬಾಬುಡಗಿರಿ ಚಳವಳಿಯಲ್ಲಿ ತೊಡಗಿಸಿಕೊಂಡ ಹಿನ್ನೆಲೆ ಯಲ್ಲಿ ಕಾರ್ನಾಡ್ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಸಮಾವೇಶ ನಡೆ ಯುತ್ತಿರುವ ಸಂದರ್ಭ ಹಾಲ್‌ನ ಎದುರಿನ ಮಾರ್ಗದಲ್ಲಿ ಸಂಘಪರಿವಾರದ ಕಾರ್ಯಕರ್ತರು ಕಾರ್ನಾಡ್ ಅವರ ಪ್ರತಿಕೃತಿ ರಚಿಸಿ ಶವಸಂಸ್ಕಾರದ ಪ್ರತಿ ಭಟನೆಯನ್ನು ನಡೆಸಿದ್ದರು ಎಂದು ಹೇಳಿದರು.
ಕಾರ್ಯಕ್ರಮ ಮುಗಿದ ಬಳಿಕ ಸಂಜೆ ಉಡುಪಿಯಲ್ಲೇ ಉಳಿದುಕೊಂಡಿದ್ದ ಕಾರ್ನಾಡ್‌ರಲ್ಲಿ ನಾನು ಈ ವಿಚಾರ ಹೇಳಿದೆ. ಆಗ ಅವರು ‘ಅದನ್ನು ನಾನು ಕೂಡ ನೋಡಬೇಕಿತ್ತು. ತುಂಬಾ ಏಂಜಾಯ್ ಮಾಡುತ್ತಿದ್ದೆ’ ಎಂದು ತುಂಬಾ ಖುಷಿ ಪಟ್ಟಿದ್ದರು ಎಂು ಜಿ.ರಾಜಶೇಖರ್ ನೆನಪಿಸಿಕೊಂಡರು.
‘ಕಾರ್ನಾಡ್ ಸಂಘಪರಿವಾರದ ಬೆದರಿಕೆಯ ಮಧ್ಯೆಯೇ ಉಡುಪಿಯಲ್ಲಿ ನಡೆದ ಮುಸ್ಲಿಮ್ ಒಕ್ಕೂಟದ ಸಮಾವೇಶಕ್ಕೆ ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ್ದರು. ಅದರ ನಂತರ ಅವರು ಯಾವುದೇ ಕಾರ್ಯಕ್ರಮಕ್ಕೆ ಉಡುಪಿಗೆ ಆಗಮಿಸಿಲ್ಲ. ಅದಕ್ಕೂ ಮೊದಲು ರಥಬೀದಿ ಗೆಳೆಯರ ಗೋಷ್ಠಿಯಲ್ಲಿ ಭಾಗವಹಿಸಲು ಎರಡು ಮೂರು ಬಾರಿ ಉಡುಪಿಗೆ ಬಂದಿದ್ದರು’ ಎಂದು ಚಿಂತಕ ಪ್ರೊ.ಫಣಿರಾಜ್ ಹೇಳಿದರು.
ಮನೆಗೆ ಆಶ್ಚರ್ಯಕರ ಭೇಟಿ: 20 ವರ್ಷಗಳ ಹಿಂದೆ ಗಿರೀಶ್ ಕಾರ್ನಾಡ್ ಹಿರಿಯ ವಿಮರ್ಶಕ ಪ್ರೊ.ಮುರಳಿಧರ ಉಪಾಧ್ಯಾಯ ಅವರ ದೊಡ್ಡಣಗುಡ್ಡೆ ಯಲ್ಲಿರುವ ಮನೆಗೆ ಆಶ್ಚರ್ಯಕರ ಭೇಟಿ ನೀಡಿದ್ದರು. ಈ ವಿಚಾರವನ್ನು ಮುರಳೀಧರ ಉಪಾಧ್ಯಾಯ ಪತ್ರಿಕೆ ಜೊತೆ ಹಂಚಿಕೊಂಡರು.
‘ಸುಮಾರು 20ವರ್ಷಗಳ ಹಿಂದೆ ಗಿರೀಶ್ ಕಾರ್ನಾಡ್ ಟಿಪ್ಪು ಸುಲ್ತಾನ್ ಕುರಿತ ನಾಟಕ ರಚಿಸುವ ತಯಾರಿಯಲ್ಲಿದ್ದರು. ಆ ಸಮಯದಲ್ಲಿ ಉಡುಪಿ ಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಭಾಗವಹಿಸಲು ಬಂದಿದ್ದ ಅವರಲ್ಲಿ ‘ಟಿಪ್ಪು ಸುಲ್ತಾನ್ ಕಾಸರಗೋಡಿಗೆ ಆಗಮಿಸಿರುವ ಉಲ್ಲೇಖ ಇರುವ ಪುಸ್ತಕ ನನ್ನಲ್ಲಿ ಇದೆ’ ಎಂದು ಹೇಳಿದ್ದೆ.
‘ಅಂದು ಉಡುಪಿಯ ಹೊಟೇಲೊಂದರಲ್ಲಿ ಉಳಿದುಕೊಂಡಿದ್ದ ಕಾರ್ನಾಡ್ ಮರುದಿನ ಬೆಳಗ್ಗೆ ಒಬ್ಬರೇ ವಾಕಿಂಗ್ ಮಾಡುತ್ತ ದೊಡ್ಡಣಗುಡ್ಡೆ ಯಲ್ಲಿರುವ ನನ್ನ ಮನೆಗೆ ಆಶ್ಚರ್ಯಕರ ಭೇಟಿ ನೀಡಿದ್ದರು. ಬಳಿಕ ನನ್ನಲ್ಲಿದ್ದ ಟಿಪ್ಪು ಸುಲ್ತಾನ್ ಕುರಿತ ಪುಸ್ತಕದಿಂದ ಮಾಹಿತಿ ಪಡೆದ ಅವರು, ಕಾಫಿ ಕುಡಿದು ಹೊರಟರು. ಬಳಿಕ ಅವರು ಅಲ್ಲೇ ಸಮೀಪ ಇದ್ದ ಎಸ್‌ಟಿಡಿ ಬೂತ್‌ನಿಂದ ಬೆಂಗಳೂರಿಗೆ ಕರೆ ಮಾಡಲು ಬೂತ್‌ಗೆ ಹೋದರು. ಆಗ ಚಲನಚಿತ್ರದಲ್ಲಿ ಖ್ಯಾತರಾಗಿದ್ದ ಕಾರ್ನಾಡ್‌ರನ್ನು ಗಮನಿಸಿದ ಸ್ಥಳೀಯರು ಸ್ಥಳದಲ್ಲಿ ಸೇರಲು ಆರಂಭಿಸಿದರು. ಕೂಡಲೇ ಅವರು ರಿಕ್ಷಾ ಹತ್ತಿ ಕೊಂಡು ಹೊಟೇಲ್‌ನತ್ತ ಹೊರಟರು’ ಎಂದು ಮುರಳೀಧರ ಉಪಾಧ್ಯಾಯ ತಿಳಿಸಿದರು.
‘ನಾಗಮಂಡಲ’ ನಾಟಕ ಪ್ರದರ್ಶನಕ್ಕೆ ಅಡ್ಡಿ
ಹಿಂದುತ್ವ ವಿರುದ್ಧ ಹೇಳಿಕೆ ನೀಡಿದ ಕಾರಣಕ್ಕೆ ಮೂರು ವರ್ಷಗಳ ಹಿಂದೆ ಗಿರೀಶ್ ಕಾರ್ನಾಡ್ ಅವರ ‘ನಾಗಮಂಡಲ’ ನಾಟಕವನ್ನು ಉಡುಪಿ ಜಿಲ್ಲೆ ಯಲ್ಲಿ ಪ್ರದರ್ಶಿಸಲು ವಿಶ್ವ ಹಿಂದು ಪರಿಷತ್ ಅಡ್ಡಿ ಪಡಿಸಿತ್ತು. ಈ ಘಟನೆ ಆ ಸಂದರ್ಭದಲ್ಲಿ ಸಾಕಷ್ಟು ವಿವಾದ ಸೃಷ್ಠಿಸಿತ್ತು.
ರಂಗ ನಿರ್ದೇಶಕ ರವಿರಾಜ್ ಎಚ್.ಪಿ. ನಿರ್ದೇಶನದಲ್ಲಿ ಉಡುಪಿ ರಂಗ ಭೂಮಿ ತಂಡ ‘ನಾಗಮಂಡಲ’ ನಾಟಕವನ್ನು ಉಡುಪಿ ಜಿಲ್ಲೆಯಲ್ಲಿ ಪ್ರದರ್ಶಿ ಸಲು ವಿಎಚ್‌ಪಿ ಅಡ್ಡಿ ಉಂಟು ಮಾಡಿತ್ತಲ್ಲದೆ ನಾಟಕ ಪ್ರದರ್ಶಿಸಲು ಅವ ಕಾಶ ನೀಡದಂತೆ ಸಂಘಟಕರಿಗೆ ಬೆದರಿಕೆಯನ್ನು ಒಡ್ಡಿತ್ತು. ಈ ಕಾರಣದಿಂದ ಬೈಂದೂರಿನಲ್ಲಿ ಪೊಲೀಸ್ ಭದ್ರತೆಯಲ್ಲಿ ನಾಟಕವನ್ನು ಪ್ರದರ್ಶಿಸಲಾಗಿತ್ತು.
‘2017ರಲ್ಲಿ ಮಣಿಪಾಲದ ದೇವಸ್ಥಾನದಲ್ಲಿ ನಿಗದಿಯಾಗಿದ್ದ ನಾಗಮಂಡಲ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿಎಚ್‌ಪಿ ಬೆದರಿಕೆ ಯೊಡ್ಡಿತ್ತು. ಈ ಹಿನ್ನೆಲೆಯಲ್ಲಿ ದೇವಸ್ಥಾನದವರು ನಾಟಕದ ಪ್ರದರ್ಶನವನ್ನೇ ರದ್ದು ಪಡಿಸಿದ್ದರು. ಅದೇ ರೀತಿ ಜಿಲ್ಲೆಯಲ್ಲಿ ಎಲ್ಲೂ ಕೂಡ ನಾಟಕ ಪ್ರದರ್ಶನಕ್ಕೆ ಅವಕಾಶವೇ ನೀಡಲಿಲ್ಲ. ಕಾರ್ನಾಡ್ ಅವರ ಕೃತಿ ಬೇರೆ ಮತ್ತು ಅವರ ವೈಯಕ್ತಿಕ ಅಭಿಪ್ರಾಯ ಬೇರೆಯೇ ಎಂಬುದಾಗಿ ನಾವು ಅಂದು ವಿಎಚ್‌ಪಿಯ ಕ್ರಮ ವನ್ನು ಬಲವಾಗಿ ವಿರೋಧಿಸಿದ್ದೆವು. ಈ ಕುರಿತು ಕಾರ್ನಾಡ್ ಅವರು ಕೂಡ ಹೇಳಿಕೆಯನ್ನು ನೀಡಿದ್ದರು ಎಂದು ರವಿರಾಜ್ ಎಚ್.ಪಿ. ನೆನಪಿಸಿಕೊಂಡರು.