×
Ad

ಗಿರೀಶ್ ಕಾರ್ನಾಡ್ ನಿಧನ: ಶೋಕಾಚರಣೆಯ ನಡುವೆಯೂ ನಡೆದ ಸಭೆ

Update: 2019-06-10 17:54 IST

ಮಂಗಳೂರು, ಜೂ.10: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನಿಧನ ಹಿನ್ನೆಲೆಯಲ್ಲಿ ಸೋಮವಾರ ಸರಕಾರ ಸಂತಾಪ ಸೂಚಕವಾಗಿ ರಜೆಯನ್ನು ಘೋಷಿಸಿತ್ತು. ವೇಳೆ ಯಾವುದೇ ಸರಕಾರಿ ಕಾರ್ಯಕ್ರಮಗಳನ್ನು ನಡೆಸದಂತೆ ತನ್ನ ಆದೇಶದಲ್ಲಿ ತಿಳಿಸಿತ್ತು. ಆದರೆ ಶೋಕಾಚರಣೆಯ ನಿಮಿತ್ತ ಎರಡು ನಿಮಿಷಗಳ ಮೌನ ನಡೆಸಿ ಸಭೆ ನಡೆಸಿದ ಘಟನೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆಯಿತು.

ಮಂಗಳೂರು ತಾಲೂಕು ಪಂಚಾಯತ್ ಸಭೆ ಇಂದು ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಿಗದಿಯಾಗಿತ್ತು. ಬೆಳಗ್ಗೆ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್‌ರ ನಿಧನದ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಯ ಸುಮಾರಿಗೆ ಶೋಕಾಚರಣೆ ಘೋಷಣೆಯಾಗಿತ್ತು. ಆದರೆ ಇಂದು 10 ಗಂಟೆಗೆ ನಿಗದಿಯಾಗಿದ್ದ ಸಭೆ ಆರಂಭವಾಗಿದ್ದು 11.30ರ ವೇಳೆಗೆ. ಈ ಸಂದರ್ಭ ಶೋಕಾಚರಣೆಯ ವಿಚಾರವನ್ನು ಅಲ್ಲಿದ್ದ ಅಧಿಕಾರಿಗಳು ಹಾಗೂ ಅಧ್ಯಕ್ಷರ ಗಮನಕ್ಕೆ ತರಲಾದರೂ, ವೌನಾಚರಿಸಿ ಸಭೆ ನಡೆಸಲಾಯಿತು.

94 ಸಿ- 94 ಸಿಸಿ ಅರ್ಜಿಗಳ ವಿಲೇವಾರಿಗೆ ಕ್ರಮ

ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ 94 ಸಿ ಮತ್ತು 94ಸಿಸಿ ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಗುರುಪ್ರಸಾದ್‌ರವರು ತಾ.ಪಂ. ಸಭೆಯಲ್ಲಿ ಚಚೆಯರ್ ಸಂದರ್ಭ ಭರವಸೆ ನೀಡಿದರು.

ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ , 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿ 10 ದಿನ ಕಳೆದರೂ ಖಾತೆ ಆಗಿಲ್ಲ ಎಂಬ ಸದಸ್ಯ ಶ್ರೀಧರ್ ಅವರ ಪ್ರಶ್ನೆಗೆ ಉತ್ತರಿಸಿದ ತಹಸೀಲ್ದಾರ್ ಗುರುಪ್ರಸಾದ್, 94 ಸಿ ಮತ್ತು 94 ಸಿಸಿ ಅಡಿಯಲ್ಲಿ ಗಡಿ ಗುರುತು ಮಾಡುವ ಅಗತ್ಯ ಇಲ್ಲ, ಆದರೆ ನಿವೇಶನದಲ್ಲಿ ಹಕ್ಕು ಪತ್ರ ಪಡೆದವರಿಗೆ ಗಡಿಗುರುತು ಮಾಡಲಾಗುವುದು ಎಂದರು.

ಕಳೆದ 3 ತಿಂಗಳಲ್ಲಿ ಚುನಾವಣಾ ಕಾರಣಕ್ಕೆ ಹಕ್ಕು ಪತ್ರ ನೀಡಿಕೆ ಅರ್ಜಿಯನ್ನು ವಿಲೇವಾರಿ ಮಾಡುವುದು ವಿಳಂಬವಾಗಿದೆ. 94 ಸಿಸಿ ಅಡಿಯಲ್ಲಿ ಸುಮಾರು 5,500 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಮೂಲ್ಕಿ-ಮೂಡುಬಿದಿರೆ ಫಿರ್ಕಾದಲ್ಲಿ 1,000 ಅರ್ಜಿಗಳು ಬಾಕಿ ಉಳಿದಿವೆ. ಇವುಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

94 ಸಿಸಿ ಅಡಿಯಲ್ಲಿ ಹಕ್ಕು ಪತ್ರ ನೀಡಿದ ಬಳಿಕ ಆರ್‌ಟಿಸಿಗೆ ಪ್ರತ್ಯೇಕ ಅರ್ಜಿ ನೀಡಬೇಕಾದ ಅಗತ್ಯವಿಲ್ಲ. ಆರ್‌ಟಿಸಿಯನ್ನು ಕಂದಾಯ ಇಲಾಖೆಯೇ ಸ್ವಯಂ ಆಗಿ ನೀಡಲಿದೆ. ಅರ್ಜಿದಾರು ತಮ್ಮ ಜಾಗದ ಖಾತೆಯನ್ನು ಮಾಡಿಸಿಕೊಂಡರೆ ಸಾಕಾಗುತ್ತದೆ ಎಂದರು.

94 ಸಿಸಿ ಅಡಿಯಲ್ಲಿ ನೀಡಿದ ಹಕ್ಕುಪತ್ರದಲ್ಲಿ ಹಲವು ಲೋಪದೋಷಗಳಿವೆ. ಇವುಗಳನ್ನು ಸರಿಪಡಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಸದಸ್ಯ ಶ್ರೀಧರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಕುರಿತ ಕಡತ ತಾ.ಪಂ.ನಲ್ಲಿದೆ. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಹಕ್ಕುಪತ್ರ ಮಂಜೂರು ಮಾಡುತ್ತಾರೆ. ಈಗ ಹಕ್ಕುಪತ್ರದಲ್ಲಿ ಲೋಪದೋಷಗಳು ಕಂಡುಬಂದಿರುವುದರಿಂದ ಮತ್ತೆ ಅಳತೆ ಮಾಡಿ ಹೊಸದಾಗಿ ನಕ್ಷೆ ಮಾಡಬೇಕಾಗಿದೆ. ಈ ಬಗ್ಗೆ ಗ್ರಾಮ ಕರಣಿಕರಿಗೆ ಸೂಚನೆ ನೀಡಲಾಗಿದೆ. ಪಾವೂರು, ಅಂಬ್ಲಮೊಗರು ಹಾಗೂ ಮೂಡುಬಿದಿರೆಯಲ್ಲಿ ಲೋಪದೋಷ ಪ್ರಕರಣಗಳು ಪತ್ತೆಯಾಗಿವೆ. ಈ ಲೋಪದೋಷಗಳನ್ನು ಒನ್ ಟೈಮ್ ತಿದ್ದುಪಡಿ ಮೂಲಕ ಪರಿಹರಿಸಲಾಗುವುದು ಎಂದರು.

ಪ್ರಸಕ್ತ ಸಾಲಿನಲ್ಲಿ ಮಾರ್ಚ್‌ವರೆಗೆ ಗುರುಪುರ ಅಣೆಕಟ್ಟೆ ಕಾಲುವೆಯ ದೊಡ್ಡಳಿಕೆಯಿಂದ ಒಟ್ಟು 8 ಕಿ.ಮೀ. ವರೆಗೆ ಕಾಲುವೆಯಲ್ಲಿ ನೀರು ಹರಿಸಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿಂದ ಮುಂದಕ್ಕೆ ಫಲ್ಗುಣಿ ನದಿಗೆ ಕಿಂಡಿಅಣೆಕಟ್ಟೆ ನಿರ್ಮಿಸಿ 8.50 ಕಿ.ಮೀ. ವರೆಗೆ ಕಾಲುವೆ ಮೂಲಕ ನೀರು ಪೂರೈಸುವ ಯೋಜನೆ ಇದೆ. ಇದಲ್ಲದೆ 3 ಕಿ.ಮೀ. ವ್ಯಾಪಿತಿಗೆ 2 ಕೋಟಿ ರು. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆಯ ಪ್ರಸಾತಿಪ ಕೈಗೊಳ್ಳಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಸಭೆಯಲ್ಲಿ ತಿಳಿಸಿದರು.

ಜಿಪಂ ಸದಸ್ಯ ಇಬ್ರಾಹೀಂ, ತಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ, ಸ್ಥಾಯಿ ಸಮಿತಿ ಸದಸ್ಯೆ ರೀಟಾ ಕುಟಿನ್ಹಾ, ಪ್ರಭಾರ ಇಒ ಚಂದ್ರಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News