×
Ad

ಸಾಲಮನ್ನಾ: ರೈತರಿಗೆ ಮಾಹಿತಿ ನೀಡಲು ಐವನ್ ಸೂಚನೆ

Update: 2019-06-10 20:14 IST

ಉಡುಪಿ, ಜೂ. 10: ರಾಜ್ಯ ಸರಕಾರದ ಸಾಲಮನ್ನಾ ಯೋಜನೆಯಡಿ ಜಿಲ್ಲೆಯಲ್ಲಿ ರೈತರ ಖಾತೆಗೆ ಬಿಡುಗಡೆಯಾದ ಮೊತ್ತದ ಬಗ್ಗೆ ಪ್ರತಿಯೊಬ್ಬ ರೈತನಿಗೂ ಸಮರ್ಪಕ ಮಾಹಿತಿ ನೀಡುವಂತೆ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೋಮವಾರ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಅಧಿಕಾರಿಗಳ ಸಭೆ ನಡೆಸಿ, ಸಾರ್ವಜನಿಕರಿಂದ ಕುಂದುಕೊರತೆಗಳ ಅರ್ಜಿ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 4720 ಖಾತೆಗಳು ಹಾಗೂ ಸಹಕಾರ ಸಂಘಗಳಲ್ಲಿ 24,232 ರೈತರ ಖಾತೆಗಳು ಸಾಲಮನ್ನಾಗೊಳ್ಳಲು ಅರ್ಹತೆ ಪಡೆದಿವೆ. ಈ ಪೈಕಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ರೂ. 8.26 ಕೋಟಿ ಹಾಗೂ ಸಹಕಾರಿ ಬ್ಯಾಂಕ್‌ಗಳಿಗೆ 69.46 ಕೋಟಿ ರೂ. ಈಗಾಗಲೇ ರಾಜ್ಯ ಸರಕಾರದಿಂದ ಬಿಡುಗಡೆಯಾಗಿ, ರೈತರ ಖಾತೆಗಳಿಗೆ ಜಮೆಯಾಗಿ ಸಾಲಮನ್ನಾ ಗೊಳಿಸಲಾಗಿದೆ ಎಂದವರು ತಿಳಿಸಿದರು.

ಆದರೆ, ಬಹುತೇಕ ಬ್ಯಾಂಕುಗಳು ಈ ಮಾಹಿತಿಯನ್ನು ರೈತರಿಗೆ ನೀಡದಿರು ವುದರಿಂದ ತಮ್ಮ ಸಾಲಮನ್ನಾಗೊಂಡಿರುವ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಸಾಲಮನ್ನಾಗೆ ಹಣ ಬಿಡುಗಡೆಯಾಗಿರುವ ಪ್ರತಿಯೊಬ್ಬ ರೈತನಿಗೂ ಪತ್ರದ ಮೂಲಕ ಮಾಹಿತಿ ನೀಡಲು ಅವರು ಸೂಚಿಸಿದರು.

ರಾಜ್ಯ ಸರಕಾರದ ವಿವಿಧ ಪಿಂಚಣಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಪ್ರತೀ ತಿಂಗಳು ಸಕಾಲದಲ್ಲಿ ಪಿಂಚಣಿ ಲ್ಯವಾಗುವಂತೆ ಮುತುವರ್ಜಿ ವಹಿಸ ಬೇಕು. ಪಿಂಚಣಿ ಅದಾಲತ್ ಮೂಲಕ ಈಗಾಗಲೇ ಪಿಂಚಣಿ ವಿಳಂಬದಲ್ಲಿ ಆಗುವ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ಸಮನ್ವಯ ಕೊರತೆಯಾಗದಂತೆ ಗಮನಹರಿಸಲು ಐವನ್ ಡಿಸೋಜಾ ತಿಳಿಸಿದರು.

ಭೂ ಮಂಜೂರಾತಿಗೆ ಸಂಬಂಧಿಸಿದಂತೆ 94 ಸಿ ಅಡಿ 33,728 ಅರ್ಜಿಗಳು ಹಾಗೂ 94ಸಿಸಿ ಅಡಿಯಲ್ಲಿ 8,921 ಅರ್ಜಿಗಳು ಉಡುಪಿ ಜಿಲ್ಲೆಯಲ್ಲಿ ಸ್ವೀಕೃತವಾಗಿವೆ. ಈ ಪೈಕಿ ಶೇ.86 ರಷ್ಟು ಅರ್ಜಿಗಳು ವಿಲೇವಾರಿಗೊಂಡಿ ರುವುದು ಶ್ಲಾಘನೀಯವಾಗಿದೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.

ಭೂದಾಖಲೆಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಆಯಾ ಗ್ರಾಮ ಮಟ್ಟದಲ್ಲೇ ವಿಶೇಷ ಅದಾಲತ್ ನಡೆಸಿ ಪರಿಹಾರ ಒದಗಿಸಬೇಕು. ಭೂಪರಿವರ್ತನೆಗೆ ಪ್ರಸಕ್ತ ಆನ್‌ಲೈನ್ ಮೂಲಕವೇ ಎಲ್ಲಾ ಪ್ರಕ್ರಿಯೆ ನಡೆಸಿ ಅರ್ಜಿ ಸಲ್ಲಿಸಲು ರಾಜ್ಯ ಸರಕಾರ ವ್ಯವಸ್ಥೆ ಜಾರಿಗೆ ತಂದಿದೆ ಎಂದು ಐವನ್ ಡಿಸೋಜಾ ತಿಳಿಸಿದರು.

ವಕ್ಫ್ ಆಸ್ತಿ ಒತ್ತುವರಿ ತೆರವು: ಉಡುಪಿ ಜಿಲ್ಲೆಯಲ್ಲಿ ವಕ್ಫ್‌ಗೆ ಸಂಬಂಧಪಟ್ಟ ಜಮೀನು, ಆಸ್ತಿ ಒತ್ತುವರಿಯಾಗಿರುವ ಬಗ್ಗೆ ಸಂಸದೀಯ ಕಾರ್ಯದರ್ಶಿಗಳು ಸಭೆಯಲ್ಲಿ ಮಾಹಿತಿ ಕೋರಿದರು. ಇದಕ್ಕೆ ಉತ್ತರಿಸಿದ ವಕ್ಫ್ ಅಧಿಕಾರಿ, ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ವಕ್ಫ್‌ಗೆ ಸಂಬಂಧಪಟ್ಟ ಆಸ್ತಿಗಳನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಒತ್ತುವರಿಯಾಗಿರುವ ಎಲ್ಲಾ ಆಸ್ತಿಗಳ ಸಮಗ್ರ ವಿವರ ಪಡೆದು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಒತ್ತುವರಿ ತೆರವು ಗೊಳಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಲು ಐವನ್ ಡಿಸೋಜಾ ಸೂಚಿಸಿದರು.

ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಉಡುಪಿ ಜಿಲ್ಲೆಗೆ ಪ್ರಸಕ್ತ ಒಂದು ಉಪವಿಭಾಗ ಮಾತ್ರ ಇದ್ದು, ಆಡಳಿತಾತ್ಮಕ ದೃಷ್ಟಿಯಿಂದ ಉಡುಪಿಯಲ್ಲಿ ಇನ್ನೊಂದು ಉಪವಿಭಾಗದ ಅಗತ್ಯವಿದೆ. ಅಲ್ಲದೇ, ಗ್ರಾಮಕರಣಿಕರಿಗೆ ಆಯಾ ಗ್ರಾಮದಲ್ಲಿಯೇ ಕಚೇರಿ ಒದಗಿಸಲು ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ರಾಜ್ಯ ಸರಕಾರದಿಂದ ಮಂಜೂರು ಗೊಳಿಸಲು ಮನವಿ ಮಾಡಿದರು.

ಅಲ್ಲದೇ, ವಿವಿಧಅಭಿವೃದ್ಧಿ ಯೋಜನೆಗಳಿಗೆ ಮಂಜೂರುಗೊಂಡ ಸರಕಾರದ ಭೂಮಿಗಳಲ್ಲಿ ಕೆಲವೆಡೆ ಡೀಮ್ಡ್ ಫಾರೆಸ್ಟ್ ಸಮಸ್ಯೆ ಇದ್ದು, ಇದನ್ನು ಬಗೆಹರಿಸಲು ಈಗಾಗಲೇ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಐವನ್ ಡಿಸೋಜಾ, ಉಡುಪಿಗೆ ಪ್ರತ್ಯೇಕ ಉಪ ವಿಭಾಗ ರಚಿಸಲು ಸರಕಾರದ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸು ವುದಾಗಿ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ್, ಜಿಲ್ಲೆಯ ತಾಲೂಕುಗಳ ತಹಶೀಲ್ದಾರ್‌ಗಳು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News