ಪ್ರಧಾನಿ, ಇತರರ ಮಾದರಿ ನೀತಿ ಸಂಹಿತೆ ಉಲ್ಲಂಘನೆ ವಿವರ ನೀಡಲು ಚು.ಆಯೋಗ ನಿರಾಕರಣೆ

Update: 2019-06-10 15:14 GMT

ಹೊಸದಿಲ್ಲಿ, ಜೂ.10: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಇತರ ರಾಜಕಾರಣಿಗಳಿಂದ ನಡೆದಿರುವ ನೀತಿ ಸಂಹಿತೆ ಉಲ್ಲಂಘನೆ ಘಟನೆಗಳು ಮತ್ತು ಅವರಿಗೆ ನೀಡಲಾದ ಕ್ಲೀನ್‌ಚಿಟ್‌ಗಳ ಬಗ್ಗೆ ಯಾವುದೇ ರೀತಿಯ ವಿವರವನ್ನು ನೀಡಲು ಚುನಾವಣಾ ಆಯೋಗ ನಿರಾಕರಿಸಿದೆ.

ಈ ಮಾಹಿತಿಯ ಸಂಕಲನವನ್ನು ಹೊರಗಡೆ ನೀಡುವುದರಿಂದ ಅದರ ಸಂಪನ್ಮೂಲಗಳ ಅನುಚಿತ ಬದಲಾವಣೆ ನಡೆಯುವ ಸಾಧ್ಯತೆಯಿದೆ ಎಂದು ಆಯೋಗ ತಿಳಿಸಿದೆ. ಪ್ರಧಾನ ಮಂತ್ರಿ ಉಲ್ಲಂಘಿಸಿರುವ ನೀತಿ ಸಂಹಿತೆ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಇಬ್ಬರು ಚುನಾವಣಾ ಆಯುಕ್ತರ ಪೈಕಿ ಒಬ್ಬರು ವ್ಯಕ್ತಪಡಿಸಿದ್ದ ಅಸಮ್ಮತಿಯ ಬಗೆಗಿನ ದಾಖಲೆಯ ಪ್ರತಿಯನ್ನು ನೀಡಲೂ ಚುನಾವಣಾ ಆಯೋಗ ನಿರಾಕರಿಸಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಅತ್ಯಂತ ಗೌಪ್ಯವಾಗಿರುವ ಕೊಠಡಿಗಳಲ್ಲಿ ನಡೆಸಲಾಗುತ್ತದೆ. ನೀವು ಮಾಹಿತಿ ಹಕ್ಕಿನಡಿ ಕೇಳಿರುವ ಮಾಹಿತಿ ಸಂಗ್ರಹದ ರೂಪದಲ್ಲಿದ್ದು, ಅದನ್ನು ಹೊರಗೆ ನೀಡುವುದರಿಂದ ಮಾಹಿತಿ ಸಂಪನ್ಮೂಲ ಅನುಚಿತವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಚುನಾವಣಾ ಆಯೋಗ ತನ್ನ ಉತ್ತರದಲ್ಲಿ ತಿಳಿಸಿದೆ.

 ಎಪ್ರಿಲ್‌ನಲ್ಲಿ ಮಹಾರಾಷ್ಟ್ರದಲ್ಲಿ ಮಾಡಿದ ಎರಡು ಭಾಷಣಗಳಲ್ಲಿ ಪ್ರಧಾನಿ ಮಾಡಿದ್ದರು ಎನ್ನಲಾದ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಚುನಾವಣಾ ಆಯೋಗ ಕ್ಲೀನ್‌ಚಿಟ್ ನೀಡಿರುವ ಬಗ್ಗೆ ಇಬ್ಬರಲ್ಲಿ ಒಬ್ಬ ಚುನಾವಣಾ ಆಯುಕ್ತ ಅಸಮ್ಮತಿ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News