×
Ad

ಮುಂಗಾರು ವಿಕೋಪ ತಡೆಗೆ ಸನ್ನದ್ಧರಾಗಲು ಸಚಿವ ಖಾದರ್ ಕರೆ

Update: 2019-06-10 20:20 IST

ಮಂಗಳೂರು, ಜೂ.10: ರಾಜ್ಯದಲ್ಲಿ ಮುಂಗಾರು ವೇಳೆ ಕಡಲ್ಕೊರೆತ ಸಹಿತ ಭೂಕುಸಿತ, ಕೃತಕ ನೆರೆಯನ್ನು ನಿಭಾಯಿಸಲು ಈಗಾಗಲೇ ಜಿಲ್ಲಾಡಳಿತ ಸಜ್ಜಾಗಿದ್ದು, ಎನ್‌ಎಂಪಿಟಿಯಲ್ಲಿ 25 ಮಂದಿಯನ್ನು ಒಳಗೊಂಡ ಎನ್‌ಡಿಆರ್‌ಎಫ್ ಪಡೆ ಈಗಾಗಲೇ ಜಿಲ್ಲೆಗೆ ಆಗಮಿಸಿದೆ. ಪ್ರಾಕೃತಿಕ ವಿಕೋಪ ತಡೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಮುಂಗಾರಿನ ಸವಾಲುಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಬಂದರು ಮತ್ತು ಮೀನುಗಾರಿಕಾ ಅಧಿಕಾರಿಗಳಲ್ಲಿ ಕಡಲ್ಕೊರೆತ ತಡೆಗೆ ಮುನ್ನಚ್ಚರಿಕೆ ವಹಿಸಲು ನಿರ್ದೇಶನ ನೀಡಿದರು.

ಪ್ರಾಕೃತಿಕ ವಿಕೋಪ ವೇಳೆ ಹೋಮ್ಗಾರ್ಡ್‌ಗಳ ಸದ್ಬಳಕೆ ಬಗ್ಗೆ ಅವರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಬಗ್ಗೆ ಸಲಹೆ ಮಾಡಿದರು. ಜಿಲ್ಲೆಯಲ್ಲಿ ಜೀವರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಯಾವ ರೀತಿ ನೆರವು ನೀಡಬಹುದು ಎಂಬುದರ ಕುರಿತು ಸಚಿವರು ಜಿಲ್ಲಾಧಿಕಾರಿ ಜೊತೆ ಚರ್ಚೆ ನಡೆಸಿದರು.

ಭೂಕುಸಿತ, ನೆರೆ ಸಂದರ್ಭ ಎನ್‌ಡಿಆರ್‌ಎಫ್ ಬಳಕೆ ಬಗ್ಗೆ ಹಾಗೂ ಅರಣ್ಯ ಇಲಾಖೆಯು ಮರಗಳ ತೆರವಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News