×
Ad

ಪ್ರಾಪರ್ಟಿ ಕಾರ್ಡ್ ಗೊಂದಲದ ವಿರುದ್ಧ ಬಿಜೆಪಿ ಪ್ರತಿಭಟನೆ

Update: 2019-06-10 20:30 IST

ಮಂಗಳೂರು, ಜೂ.10: ನಗರದಲ್ಲಿ ಜಾರಿ ಮಾಡಿರುವ ಪ್ರಾಪರ್ಟಿ ಕಾರ್ಡ್ ಯೋಜನೆಯಲ್ಲಿರುವ ಗೊಂದಲಗಳನ್ನು ಶೀಘ್ರ ನಿವಾರಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು.ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಎಚ್ಚರಿಸಿದ್ದಾರೆ.

ನಗರದ ಮಿನಿವಿಧಾನ ಸೌಧದ ಎದುರು ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆಯ ಕುರಿತು ಸೋಮವಾರ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು.

ನಗರ ವ್ಯಾಪ್ತಿಯ 32 ಗ್ರಾಮಗಳಿಗೆ ಪ್ರಾಪರ್ಟಿ ಕಾರ್ಡ್ ಅನ್ವಯವಾಗಲಿದೆ. ಈ ಭೂ ಪ್ರದೇಶದಲ್ಲಿ 1.7 ಲಕ್ಷಕ್ಕಿಂತಲೂ ಅಧಿಕ ಆಸ್ತಿಗಳಿವೆ. ಪ್ರಸ್ತುತ ಕೇವಲ 30ರಿಂದ 35 ಸಾವಿರ ಆಸ್ತಿಗಳಿಗೆ(ಶೇ.20) ಪ್ರಾಪರ್ಟಿ ಕಾರ್ಡ್ ಒದಗಿಸಲಾಗಿದೆ. ಪ್ರಾಪರ್ಟಿ ಕಾರ್ಡ್ ವಿತರಣೆಯಲ್ಲಿ ಶೇ.75ರಷ್ಟು ಪ್ರಗತಿಯಾಗದೆ ಕಡ್ಡಾಯಗೊಳಿಸಬಾರದು. ಶಿವಮೊಗ್ಗ ನಗರದಲ್ಲಿ ಶೇ.80ರಷ್ಟು ಪ್ರಾಪರ್ಟಿ ಕಾರ್ಡ್‌ಗಳನ್ನು ವಿತರಣೆ ಮಾಡಿದ ಬಳಿಕ ಯೋಜನೆಯನ್ನು ಕಡ್ಡಾಯಗೊಳಿಸಲಾಗಿತ್ತು ಎಂದು ಕಾಮತ್ ನುಡಿದರು.

ಪ್ರಾಪರ್ಟಿ ಕಾರ್ಡ್ ನೀಡುವ ಯೋಜನಾ ಕಚೇರಿ ವ್ಯವಸ್ಥಿತವಾಗಿಲ್ಲ. ಕಚೇರಿಯಲ್ಲಿ ಜನತೆಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಅಗತ್ಯಕ್ಕೆ ತಕ್ಕಷ್ಟು ಕಂಪ್ಯೂಟರ್, ಸ್ಕ್ಯಾನರ್‌ಗಳಿಲ್ಲ. ಕಾರ್ಡ್ ಮಾಡಿಸಲು ಬರುವ ಜನತೆಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆಗಳಿಲ್ಲ. ಶೌಚಾಲಯದ ಸೌಲಭ್ಯವಿಲ್ಲ. 2012ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಇನ್ನೂ ಪ್ರಾಪರ್ಟಿ ಕಾರ್ಡ್ ದೊರೆತಿಲ್ಲ. ಪರಿಸ್ಥಿತಿ ಹೀಗಿರುವಾಗ ಇಂದಿನಿಂದ (ಜೂ.10) ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸುವುದಕ್ಕೆ ಯಾವುದೇ ಅರ್ಥ ಇಲ್ಲ ಎಂದು ಶಾಸಕರು ಟೀಕಿಸಿದರು.

ಸ್ಥಿರಾಸ್ತಿ ನೋಂದಾವಣೆಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸಿರುವುದನ್ನು ಮುಂದೂಡುಂತೆ ಕಂದಾಯ ಸಚಿವರು ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಮನವಿಗೆ ಪೂರಕವಾಗಿ ಸ್ಪಂದಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ವಿನಯ ಎಲ್. ಶೆಟ್ಟಿ, ಆನಂದ ಬಂಟ್ವಾಳ, ಸುಧೀರ್ ಶೆಟ್ಟಿ ಕಣ್ಣೂರು, ಜೇಮ್ಸ್ ಡಿಸೋಜ, ಮೀರಾ ಕರ್ಕೇರ, ಪ್ರಭಾಮಾಲಿನಿ, ಭಾಸ್ಕರಚಂದ್ರ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News