ಹಿಂಸಾತ್ಮಕ ಗೋ ಸಾಗಾಟದ ವಿರುದ್ಧ ಕ್ರಮಕ್ಕೆ ಮುಸ್ಲಿಂ ಲೀಗ್ ಆಗ್ರಹ
ಮಂಗಳೂರು, ಜೂ.10: ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಕಾರಿನಲ್ಲಿ ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಿಸಿದ್ದು ಖಂಡನೀಯ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರನ್ನು ಭೇಟಿಯಾಹಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ದ.ಕ.ಜಿಲ್ಲಾ ಮುಸ್ಲಿಂ ಯೂತ್ ಲೀಗ್ ತಿಳಿಸಿದೆ.
ನಗರದ ಖಾಸಗಿ ಹೊಟೇಲಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೀಗ್ ಸಂಘಟನಾ ಕಾರ್ಯದರ್ಶಿ ಹಿದಾಯತ್ ಮಾರಿಪಳ್ಳ ಕಾರಿನಲ್ಲಿದ್ದ ಗೋವುಗಳ ಪೈಕಿ ಕೆಲವು ಸತ್ತಿದ್ದು ಒಂದು ಗೋವು ಮಾತ್ರ ಜೀವನ್ಮರಣ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಗೋವುಗಳನ್ನು ಮುಸ್ಲಿಮರಿಗೆ ಮಾರಾಟ ಮಾಡಲು ಸಾಗಿಸಲಾಗುತ್ತಿತ್ತು. ಸತ್ತ ದನಗಳನ್ನು ಮಾಂಸಕ್ಕೆ ಮಾರಾಟ ಮಾಡುವವರ ವಿರುದ್ಧ ಮುಸ್ಲಿಂ ಸಮುದಾಯವೇ ಹೋರಾಟ ಮಾಡುವ ಅಗತ್ಯವಿದೆ ಎಂದರು.
ಕೇವಲ ಹಣಕ್ಕಾಗಿ ದನದ ಕಾಲು ಮತ್ತು ಕುತ್ತಿಗೆಗೆ ಹಗ್ಗದಿಂದ ಕಟ್ಟಿಹಾಕಿ ಕ್ರೂರವಾಗಿ ಕೊಂದು ವ್ಯಾಪಾರ ಮಾಡುವ ಯಾರೇ ಆಗಲಿ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಅವರನ್ನು ಕೂಡಲೇ ಬಂಧಿಸಬೇಕು. ಚಾರ್ಮಾಡಿ ಚೆಕ್‌ಪೋಸ್ಟ್ ಇದ್ದು ಈ ಚೆಕ್‌ಪೋಸ್ಟ್‌ನಲ್ಲಿ ವಾಹನದ ತಪಾಸಣೆ ಆಗಿದ್ದರೆ ಅದು ಪೊಲೀಸರ ಗಮನಕ್ಕೆ ಬಂದಿಲ್ಲವೇ? ಸರಿಯಾಗಿ ತಪಾಸಣೆ ಮಾಡಿದ್ದರೆ ಖಂಡಿತವಾಗಿ ಗೋವು ಇರುವುದು ಗೊತ್ತಾಗುತ್ತದೆ. ಚೆಕ್‌ಪೋಸ್ಟ್ ಮೂಲಕ ಆರಾಮವಾಗಿ ಕಾರಿನಲ್ಲಿ ಗೋ ಸಾಗಾಟ ಆಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಗೋ ಸಾಗಾಟಕ್ಕೆ ಪೊಲೀಸ್ ಇಲಾಖೆಯಿಂದ ಸಹಕಾರ ಸಿಕ್ಕಿದರೆ ಅಂತಹ ಪೊಲೀಸರ ವಿರುದ್ದವೂ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಮಾಜದಲ್ಲಿ ಕೋಮು ಸೌಹಾರ್ದ ಉಳಿಸಲು ಇಂತಹ ಅಮಾನವೀಯ ಕೃತ್ಯಗಳನ್ನು ಮುಸ್ಲಿಮರು ಎಂದಿಗೂ ಬೆಂಬಲಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಜಿಲ್ಲಾ ಕೇಂದ್ರಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಫ್ಬಾನ್ ಬೆಂಗರೆ, ಹೈದರ್ ಕಳಂಜ, ಮುಹಮ್ಮದ್ ಅಲೀಂ ಮತ್ತಿತರರು ಉಪಸ್ಥಿತರಿದ್ದರು.
ಡಿಸಿ-ಕಮಿಷನರ್‌ಗೆ ಮನವಿ: ಘಟನೆಯ ಸಮಗ್ರ ತನಿಖೆ ನಡೆಸಬೇಕು ಮತ್ತು ಇಂತಹ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಯೂತ್ ಲೀಗ್ ಅಧ್ಯಕ್ಷ ಸಿದ್ದೀಕ್ ತಲಪಾಡಿ, ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ತಬೂಕ್ ದಾರಿಮಿ, ಮುಸ್ಲಿಂ ಯೂತ್ ಲೀಗ್ ಜಿಲ್ಲಾಧ್ಯಕ್ಷರಾದ ಅಫಾಮ್ ತಂಗಳ್, ಪ್ರಧಾನ ಕಾರ್ಯದರ್ಶಿ ಶಬೀರ್ ತಲಪಾಡಿ, ಕೋಶಾಧಿಕಾರಿ ಹೈದರ್ ಸುಳ್ಯ, ಕಾರ್ಯದರ್ಶಿ ನೌಶಾದ್ ದೇರಳಕಟ್ಟೆ, ಉಪಾಧ್ಯಕ್ಷ ಶಬೀರ್ ಪಾಂಡವರಕಲ್ಲು ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ.