ಸಾಹಿತಿ ಗಿರೀಶ್ ಕಾರ್ನಾಡ್ ನಿಧನಕ್ಕೆ ಎಸ್‌ಡಿಪಿಐ ಸಂತಾಪ
ಮಂಗಳೂರು, ಜೂ.10: ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಎಸ್‌ಡಿಪಿಐ ರಾಜ್ಯ ಘಟಕ ಸಂತಾಪ ಸೂಚಿಸಿದೆ.
ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಮತ್ತು ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಪತ್ರಿಕಾ ಹೇಳಿಕೆ ನೀಡಿ ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ,ಸಾಹಿತಿ, ಚಿತ್ರನಟ ಮತ್ತು ನಿರ್ದೇಶಕ ಹಾಗೂ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶಿಷ್ಠ ಛಾಪು ಮೂಡಿಸಿರುವ ಗಿರೀಶ್ ಕಾರ್ನಾಡ್ ಪ್ರಗತಿಶೀಲ ಸಮತಾವಾದ ಮತ್ತು ಜಾತ್ಯತೀತತೆಯನ್ನು ಪ್ರತಿಪಾದಿಸುತ್ತಾ ಬಂದವರು. ಕೆಲವು ಬಾರಿ ನೇರ ನುಡಿಗಳ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದರೂ ಕೂಡ ಸಮಾಜವನ್ನು ತಿದ್ದುವ ಅವರ ಸಾಮಾಜಿಕ ಕಳಕಳಿಯು ಅವಿಸ್ಮರಣೀಯ. ಇಂತಹ ಜ್ಞಾನ ಭಂಡಾರವನ್ನು ಕಳೆದು ಕೊಂಡಿರುವುದು ಸಮಾಜಕ್ಕೆ ತುಂಬಲಾರದ ನಷ್ಟ ವಾಗಿರುತ್ತದೆ ಎಂದಿದ್ದಾರೆ.
ಪಿಎಫ್‌ಐ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಚಿಂತಕ, ಹೋರಾಟಗಾರ ಗಿರೀಶ್ ಕಾರ್ನಾಡ್‌ರ ನಿಧನಕ್ಕೆ ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ಸಂತಾಪ ವ್ಯಕ್ತಪಡಿಸಿದ್ದಾರೆ. ಗಿರೀಶ್ ಕಾರ್ನಾಡ್ ಕನ್ನಡ ನಾಡಿನ ಹಿರಿಮೆಯಾಗಿದ್ದು, ಅವರ ನಿಧನವು ವೈಚಾರಿಕ ಲೋಕಕ್ಕೆ ಭಾರೀ ದೊಡ್ಡ ನಷ್ಟ ಉಂಟು ಮಾಡಿದೆ. ಅವರು ಈ ನಾಡಿನಲ್ಲಿ ಬಿತ್ತಿ ಹೋಗಿರುವ ಅಕ್ಷರಗಳು ವೈಚಾರಿಕತೆಯು ಹೆಮ್ಮರವಾಗಿ ಬೆಳೆಯಲು ಎಲ್ಲ ಪ್ರಗತಿಪರ ಚಿಂತಕರು ಪರಸ್ಪರ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕಸಾಪ: ಮೂಲತಃ ದ.ಕ.ಜಿಲ್ಲೆಯ ಕಾರ್ನಾಡಿನ ಸಾರಸ್ವತ ಕುಟುಂಬದ ಹಿರಿಯ ಸಾಹಿತಿ, ರಂಗಭೂಮಿ ಹಾಗೂ ಸಿನಿಮಾ ನಟ, ದಿಗ್ದರ್ಶಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಕಾರ್ನಾಡ್‌ರ ನಿಧನಕ್ಕೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಕಸಾಪ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಹಿರಿಯ ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ, ಕಸಾಪ ಮಂಗಳೂರು ತಾಲೂಕು ಘಟಕದ ಅಧ್ಯಕ್ಷೆ ಜಯಲಕ್ಷ್ಮಿ ಬಿ. ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಪೂರ್ಣಿಮಾ ಪೇಜಾವರ, ಜನಾರ್ದನ ಹಂದೆ ಹಾಗೂ ಪೊಳಲಿ ನಿತ್ಯಾನಂದ ಕಾರಂತ ಸಂತಾಪ ಸೂಚಿಸಿದ್ದಾರೆ.
ಮುಲ್ಕಿ ಕೇಂದ್ರ ಜುಮಾ ಮಸೀದಿಯ ಖತೀಬ್ ಎಸ್‌ಬಿ ಮುಹಮ್ಮದ್ ದಾರಿಮಿ, ಮಾಂಸ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಲಿ ಹಸನ್ ಸಂತಾಪ ಸೂಚಿಸಿದ್ದಾರೆ.