ಸಮಯ ಮಿತಿಯೊಳಗೆ ರೇಷನ್ ಕಾರ್ಡ್ ವಿತರಿಸಿ: ಸಚಿವ ಖಾದರ್
ಮಂಗಳೂರು, ಜೂ.10: ಜಿಲ್ಲೆಯಲ್ಲಿ ರೇಷನ್ ಕಾರ್ಡ್ ಕೋರಿ ಬಾಕಿಯಿರುವ ಅರ್ಜಿಗಳನ್ನು ಒಂದು ತಿಂಗಳೊಳಗೆ ಇತ್ಯರ್ಥಪಡಿಸುವುದರ ಜೊತೆಗೆ ಹೊಸದಾಗಿ ಅರ್ಜಿ ಹಾಕುವವರಿಗೆ 15 ದಿನದೊಳಗೆ ರೇಷನ್ ಕಾರ್ಡ್ ನೀಡಲು ಸೂಕ್ತ ಕ್ರಮಕೈಗೊಳ್ಳಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ರೇಷನ್ ಕಾರ್ಡ್‌ಗೆ ಸಲ್ಲಿಸಿದ ಅರ್ಜಿಗಳ ಪೈಕಿ 5,186 ಅರ್ಜಿಗಳು ಬಾಕಿ ಇದೆ. ಅವರಿಗೆ ಸಕಾಲಕ್ಕೆ ರೇಷನ್ ಕಾರ್ಡ್ ವಿತರಿಸಲು ಕ್ರಮಕೈಗೊಳ್ಳಬೇಕು ಎಂದ ಸಚಿವ ಖಾದರ್ ಬೆರಳಚ್ಚು ಕೊಟ್ಟರೆ ಮಾತ್ರ ಪಡಿತರ ಎಂಬ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಕುಟುಂಬದಲ್ಲಿ ಒಬ್ಬರು ಬೆರಳಚ್ಚು ಕೊಟ್ಟರೂ ರೇಷನ್ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಬೆರಳಚ್ಚು ನೀಡಲು ಕಾಲಾವಕಾಶ ನೀಡಲಾಗುವುದು, ಈ ಬಗ್ಗೆ ಗೊಂದಲ ಬೇಡ ಎಂದು ಹೇಳಿದರು.
ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರು ಆಧಾರ್ ಮತ್ತು ಆದಾಯ ಸರ್ಟಿಫಿಕೆಟನ್ನು ಅರ್ಜಿಯ ಜೊತೆಗೆ ನೀಡಿದರೆ ಸಾಕು. 15 ದಿನದೊಳಗೆ ಕಾರ್ಡ್ ವಿತರಿಸಲು ಇಲಾಖಾಧಿಕಾರಿಗಳು ಕ್ರಮಕೈಗೊಳ್ಳುವರು ಎಂದರು.
ಜಿಲ್ಲೆಗೆ ಕುಚಿಲಕ್ಕಿ ವಿತರಿಸಲು ಆದ್ಯತೆ ನೀಡಲಾಗುವುದು. ಅಕ್ಕಿ ಮತ್ತು ಬೇಳೆಯ ಗುಣಮಟ್ಟವನ್ನು ಇಲಾಖಾ ಅಧಿಕಾರಿಗಳು ಖಾತರಿಪಡಿಸಿಕೊಳ್ಳ ಬೇಕು.ಗುಣಮಟ್ಟದಲ್ಲಿ ರಾಜಿ ಬೇಡ ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಹೊಸದಾಗಿ 25 ರೇಷನ್ ಅಂಗಡಿ ಆರಂಭಿಸಲು ಅರ್ಜಿ ಬಂದಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಡುಗೆ ಅನಿಲ ವಿತರಣೆ ಗುರಿಯಲ್ಲಿ ಶೇ.96 ಗುರಿ ಸಾಧನೆಯಾಗಿದ್ದು, ಮುಂದಿನ ಎರಡು ದಿನಗಳೊಳಗಾಗಿ ಶೇ.100 ಗುರಿ ಸಾಧನೆಯಾಗಲಿದೆ. ಅಡುಗೆ ಅನಿಲ ವಿತರಣೆ ವೇಳೆ ಎರಡು ರೀಫಿಲ್ಲಿಂಗ್ ಉಚಿತವಿರುವ ಮಾಹಿತಿಯನ್ನು ಅರ್ಹ ಫಲಾನುಭವಿಗಳಿಗೆ ನೀಡುವಂತೆ ಸಚಿವರು ಆದೇಶಿಸಿದರು.