×
Ad

ರಾಜ್ಯ ಸಚಿವ ಸಂಪುಟ ವಿಸ್ತರಣೆಯಿಂದ ಕಚ್ಚಾಟ ಉಲ್ಬಣ: ಶೋಭಾ

Update: 2019-06-10 21:16 IST

ಉಡುಪಿ, ಜೂ.10: ಸಚಿವ ಸಂಪುಟ ವಿಸ್ತರಣೆ ರಾಜ್ಯ ಸರಕಾರದ ಶವ ಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆಯಾಗಲಿದೆ. ಈ ಸರಕಾರದಲ್ಲಿ ಯಾವುದೂ ಕೂಡ ಸರಿಯಾಗಿಲ್ಲ. ಸಚಿವ ಸಂಪುಟ ವಿಸ್ತರಣೆಯ ನಂತರ ಇವರ ಕಚ್ಚಾಟ ಇನ್ನಷ್ಟು ಉಲ್ಬಣಗೊಳ್ಳುತ್ತದೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ರಾಜ್ಯದ ಜನತೆಗೆ ಮೋಸ ಆಗುತ್ತಿದೆ. ರಾಜ್ಯ ಸರಕಾರದ ಒಪ್ಪಂದ ಪಾಲಿಸದ ಜಿಂದಾಲ್ ಕಂಪೆನಿಗೆ ಅನುಕೂಲ ಮಾಡಲಾಗುತ್ತಿದೆ. ಈ ಕಂಪೆನಿಗೆ 3666 ಎಕರೆಗೆ ಶುದ್ದ ಕ್ರಯಪತ್ರ ನೀಡಲು ಮುಂದಾಗಿದೆ. ರೈತರಿಗೆ ಮೋಸ ಮಾಡಿ ಕಂಪೆನಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಇದರಲ್ಲಿ ಕಮಿಷನ್ ಏಜೆಂಟರ ಕೈವಾಡ ಇದೆ ಎಂದು ಟೀಕಿಸಿದರು.

ರಾಜ್ಯ ಸರಕಾರವನ್ನು ಬಡಿದೆಬ್ಬಿಸಲು ಜೂ.14ರಿಂದ ರಾಜ್ಯದ ಬಿಜೆಪಿ ಸಂಸದರು ಹಾಗೂ ಶಾಸಕರು ಹೋರಾಟ ನಡೆಸಲಿದ್ದಾರೆ. ರಾಜ್ಯ ಸರಕಾರ ರಾಜಿನಾಮೆ ಕೊಟ್ಟು ಮನೆಗೆ ಹೋಗಬೇಕು. ಇಲ್ಲದಿದ್ದರೆ ಕೆಲಸ ಮಾಡಬೇಕು. ಅಲ್ಲಿಯವರೆಗೆ ಬಿಜೆಪಿ ವಿಶ್ರಮಿಸುವುದಿಲ್ಲ ಎಂದು ಅವರು ತಿಳಿಸಿದರು.

ಅತಿವೃಷ್ಟಿ, ಅನಾವೃಷ್ಟಿ ನಿರ್ವಹಣೆಗೆ ಕೇಂದ್ರ ಸರಕಾರ ಕಳೆದ ಐದು ವರ್ಷ ಗಳಲ್ಲಿ ರಾಜ್ಯಕ್ಕೆ 7182 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರಕಾರ ಯಾವುದೇ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಸರಕಾರ ಬದುಕಿದೆ ಎಂದು ಅನಿಸುವುದಿಲ್ಲ. ದೊಡ್ಡ ಪ್ರಮಾಣದ ಅನುದಾನ ನೀಡಿಯೂ ರಾಜ್ಯದ ಸ್ಪಂದನೆ ಶೂನ್ಯ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News