ಅರಬಿಸಮುದ್ರದಲ್ಲಿ ಚಂಡಮಾರುತ ಸುರಕ್ಷತೆ ಕ್ರಮ ವಹಿಸಲು ಸೂಚನೆ
ಉಡುಪಿ, ಜೂ.10: ಪ್ರಸಕ್ತ ಸಾಲಿನ ಮುಂಗಾರು ಮಳೆ ಕೇರಳ ರಾಜ್ಯಕ್ಕೆ ಜೂನ್ 8ರಂದು ಪ್ರವೇಶಿಸಿದ್ದು, ಜೂನ್ 10ರ ಒಳಗಾಗಿ ಕರ್ನಾಟಕ ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಕೆಲವು ಭಾಗಗಳಿಗೆ ವ್ಯಾಪಿಸಲಿದೆ. ಈ ನಡುವೆ ಅರಬೀಸಮುದ್ರದಲ್ಲಿ ಲಕ್ಷದ್ವೀಪದ ಆಗ್ನೇಯ ಭಾಗದ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತವು ಚಂಡಮಾುತವಾಗಿ ಪರಿವರ್ತನೆಗೊಳ್ಳುತ್ತಿದೆ.
ಇಂದು ಮುಂಜಾನೆ 5:30ಕ್ಕೆ ಇದು ಲಕ್ಷದೀಪದಿಂದ ಈಶಾನ್ಯ ಭಾಗದಲ್ಲಿ 200ಕಿ.ಮೀ. ದೂರದಲ್ಲಿ ಹಾಗೂ ಮುಂಬಯಿಯಿಂದ ನೈಋತ್ಯ ಭಾಗದಲ್ಲಿ 840ಕಿ.ಮೀ. ದೂರದಲ್ಲಿ ಹಾಗೂ ಗುಜರಾತ್‌ನ ವೀರಾವಲ್‌ನಿಂದ ಆಗ್ನೇಯದ 1020ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿತ್ತು. ಮುಂದೆ ಇದು ಇನ್ನಷ್ಟು ತೀವ್ರಗೊಂಡು ಮುಂದಿನ 24ಗಂಟೆಗಳಲ್ಲಿ ಚಂಡಮಾರುತವಾಗಿ ರೂಪುಗೊಂಡು ಮುಂದಿನ 72 ಗಂಟೆಗಳಲ್ಲಿ ಉತ್ತರ-ವಾಯುವ್ಯ ದಿಕ್ಕಿನಲ್ಲಿ ಸಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಬೆಳಗ್ಗ್ಗೆ ಬಿಡುಗಡೆಗೊಳಿಸಿದ ವರದಿಯಲ್ಲಿ ತಿಳಿಸಿದೆ.
ಇದರಿಂದ ಮುಂದಿನ 2-3 ದಿನಗಳಲ್ಲಿ ರಾಜ್ಯದ ಕರಾವಳಿ ಹಾಗೂ ಒಳನಾಡು ಪ್ರದೇಶದ ಹಲವು ಭಾಗಗಳಲ್ಲಿ ಗಂಟೆಗೆ 35-45ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಾಧಾರಣದಿಂದ ಬಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಮುನ್ಸೂಚನೆ ನೀಡಿದೆ.
ಆದ್ದರಿಂದ ಜಿಲ್ಲೆಯ ಕರಾವಳಿ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮತ್ತು ಸಾರ್ವಜನಿಕರು ಅಗತ್ಯ ಮುಂಜಾಗೃತ ಸುರಕ್ಷಾ ಕ್ರಮಗಳನ್ನು ವಹಿಸುವಂತೆ, ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ: 1077, ದೂರವಾಣಿ ಸಂಖ್ಯೆ:0820-2574802ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.