×
Ad

ಕೃಷಿ ಮಾಡುವ ಮೊದಲು ಸಂಪೂರ್ಣ ಮಾಹಿತಿ ಅಗತ್ಯ: ತಾ.ಪಂ. ಅಧ್ಯಕ್ಷೆ

Update: 2019-06-10 21:20 IST

ಉಡುಪಿ, ಜೂ.10:ರೈತರು ಯಾವುದೇ ಕೃಷಿಯಲ್ಲಿ ತೊಡಗಿಕೊಳ್ಳುವ ಮೊದಲು ಆ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಅದನ್ನು ಅಳವಡಿಸಿ ಕೊಂಡಾಗ ಕೃಷಿಯಲ್ಲಿ ಉತ್ತಮ ಇಳುವರಿ ಪಡೆದು ರೈತರ ಸ್ವಯಂ ಅಭಿವೃದ್ಧಿ ಜೊತೆಗೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್‌ರಾವ್ ತಿಳಿಸಿದ್ದಾರೆ.

ಜಿಪಂನ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು, ಕೃಷಿ ಸಂಘ ಪೆರಂಪಳ್ಳಿ ಹಾಗೂ ಕೆಥೋಲಿಕ್ ಸಭಾ ಪೆರಂಪಳ್ಳಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಪೆರಂಪಳ್ಳಿ ಚರ್ಚ್ ಸಭಾವನದಲ್ಲಿ ರವಿವಾರ ನಡೆದ ಉಡುಪಿ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯ ಪ್ರತಿಯೊಂದು ಭಾಗದಲ್ಲೂ ಕೃಷಿ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳು ನಡೆದರೆ ಅಲ್ಲಿನ ರೈತರಿಗೆ ಕೃಷಿಯ ಬಗ್ಗೆ ಮಾಹಿತಿ ಪಡೆದು ಕೊಳ್ಳಲು ಸಹಕಾರಿಯಾಗುತ್ತದೆ. ಕೃಷಿ ಇಲಾಖೆಯಿಂದ ರೈತರಿಗೆ ಕೊಡ ಮಾಡುವ ಕೃಷಿಗೆ ಪೂರಕವಾದ ಸೌಲ್ಯಗಳ ಬಗ್ಗೆ ಮಾಹಿತಿ ಪಯಲು ರೈತರು ಕೃಷಿ ಮಾಹಿತಿ ಆಧಾರಿತ ಸಭೆ ಸಮಾರಂಗಳಲ್ಲಿ ಭಾಗವಹಿಸುವ ಜೊತೆಗೆ ಕೃಷಿ ಸಂಬಂಧಿತ ಇಲಾಖೆಗಳಿಗೆ ಬೇಟಿ ನೀಡಿ ಮಾಹಿತಿಯನ್ನು ಪಡೆದು ಕೊಳ್ಳಬೇಕು ಎಂದರು.

ಕೃಷಿ ಇಲ್ಲದಿದ್ದರೆ ದೇಶದಲ್ಲಿ ಏನೂ ಸಾಧ್ಯವಿಲ್ಲ. ರೈತ ಸುಖವಾಗಿದ್ದರೆ ಮಾತ್ರ ದೇಶದ ಜನತೆ ಸುಖವಾಗಿರಲು ಸಾಧ್ಯ. ಆಧುನಿಕತೆಯ ಭರಾಟೆಯಲ್ಲಿ ನಾವು ಮರಗಳನ್ನು ಕಡಿಯುತ್ತಿದ್ದು, ಅತೀ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ನೀರಿಗೆ ತತ್ವಾರ ಬಂದಿರುವುದು ಗಮನಿಸಿದರೆ ಬುದ್ದಿವಂತರ ಜಿಲ್ಲೆಯಲ್ಲಿರುವ ನಮ್ಮಿಂದಲೇ ಎಲ್ಲೋ ಲೋಪವಾಗಿದೆ ಎಂಬ ಅನುಮಾನ ಮೂಡುತ್ತದೆ. ಪ್ರಕೃತಿಯನ್ನು ನಾವು ಸಂರಕ್ಷಿಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ ಎಂದರು.

ಉಡುಪಿ ಜಿಲ್ಲಾ ಕೃಷಿ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಸಮಗ್ರ ಕೃಷಿ ಬಗ್ಗೆ ಮಾಹಿತಿ ನೀಡಿ, ರೈತರು ಕೃಷಿಯಲ್ಲಿ ಮಾಡುವ ಸಣ್ಣ ತಪ್ಪಿನಿಂದ ದೊಡ್ಡ ಪ್ರಮಾಣದ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದ್ದು, ತಾವು ಮಾಡುವ ಕೃಷಿ ಬಗ್ಗೆ ಸಹಿಯಾದ ಮಾಹಿತಿ ಪಡೆದು ಕೃಷಿ ಮಾಡಿದಾಗ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದರು. ಕೃಷಿಯಲ್ಲಿ ನಷ್ಟದ ಹೊರೆಯನ್ನು ತಪ್ಪಿಸಬೇಕಾದರೆ ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡಿ ಎಂದು ರೈತರಿಗೆ ಸಲಹೆ ನೀಡಿದ ಅವರು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕೀಟ ನಾಶಕಗಳನ್ನು ಬಳಸಬೇಕೇ ಹೊರತು ರಾಸಾಯನಿಕಗಳಿಂದ ಬೆಳೆ ಬೆಳೆಯುವಂತಿರಬಾರದು ಎಂದು ಕೃಷಿಕರಿಗೆ ಕಿವಿಮಾತು ಹೇಳಿದರು.

ಪೆರಂಪಳ್ಳಿ ಫಾತಿಮಾ ಮಾತೆ ದೇವಾಲಯದ ಧರ್ಮಗುರು ವಂ. ಅನಿಲ್ ಡಿಸೋಜಾ ಆಶೀರ್ವಚನ ನೀಡಿದರು. ನಗರಸಭಾ ಸದಸ್ಯೆ ಸೆಲಿನ್ ಕರ್ಕಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೃಷಿ ಮಾಹಿತಿ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಉಡುಪಿ ತಾಪಂ ಉಪಾಧ್ಯಕ್ಷ ರಾಜೇಂದ್ರ ಪಿ., ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ಸಸ್ಯರೋಗ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಡಾ.ಸೀಮಾ ಎಂ ನಾಯ್ಕ, ಸಸ್ಯರೋಗ ಶಾಸ್ತ್ರದ ಸಹ ಸಂಶೋಧಕ ಡಾ.ಸಂತೋಷ್, ಉಡುಪಿ ಸಹಾಯಕ ಕೃಷಿ ನಿರ್ದೇಶಕ ಮೋಹನ್‌ರಾಜ್, ಸಹಾಯಕ ತೋಟಗಾರಿಕಾ ಅಧಿಕಾರಿ ದೀಪಾ, ಜೋಸೆಪ್ ರೆಬೆಲ್ಲೋ ಮುಂತಾದವರು ಉಪಸ್ಥಿತರಿದ್ದರು.

ಪೆರಂಪಳ್ಳಿ ಕೃಷಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶ್ರೀಯಾನ್ ಸ್ವಾಗತಿಸಿದರು. ಉಡುಪಿ ಕೃಷಿ ಇಲಾಖೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಸಂಜನಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಕೆಥೋಲಿಕ್ ಸಭಾ ಪೆರಂಪಳ್ಳಿ ಘಟಕದ ರಫೆಲ್ ಡಿಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News