ಕುವೈತ್ ಅಹವಾಲು ಸಭೆ ಹಠಾತ್ ರದ್ದು: ಭಾರತೀಯ ಸಂತ್ರಸ್ತ ನೌಕರರ ಬಿಡುಗಡೆ ಮತ್ತಷ್ಟು ವಿಳಂಬ
ಮಂಗಳೂರು, ಜೂ.10: ಕುವೈತ್‌ನಲ್ಲಿ ಉದೋಗ ವಂಚನೆಗೆ ಒಳಗಾಗಿ ಅತಂತ್ರ ಸ್ಥಿತಿಯಲ್ಲಿರುವ ಭಾರತೀಯ ನೌಕರರನ್ನು ಬಿಡುಗಡೆ ಗೊಳಿಸುವ ಪ್ರಯತ್ನಕ್ಕೆ ಸೋಮವಾರ ಹಿನ್ನ್ನಡೆಯಾಗಿದೆ. ಸೋಮವಾರ ಕರೆದ ಅಹವಾಲು ಸಭೆ ಹಠಾತ್ ರದ್ದುಗೊಂಡಿದೆ. ಇದರಿಂದಾಗಿ ಭಾರತೀಯ ಸಂತ್ರಸ್ತ ನೌಕರರ ಬಿಡುಗಡೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಕುವೈತ್‌ನ ಶೋನ್ (ನ್ಯಾಯಾಲಯ ಮಾದರಿ ಸರಕಾರಿ ಸ್ವಾಮ್ಯದ ಸಂಸ್ಥೆ) ನಲ್ಲಿ ಸೋಮವಾರ ಸಭೆ ನಡೆಸಿ ಪ್ರತಿಯೊಬ್ಬರ ಅಹವಾಲು ಆಲಿಸಲು ಮುಂದಾಗಿತ್ತು. ಆದರೆ ಕೊನೆಕ್ಷಣದಲ್ಲಿ ಶೋನ್ ಅಧಿಕಾರಿಗಳು ಕೈಕೊಟ್ಟಿದ್ದು, ಸಂತ್ರಸ್ತ ನೌಕರರನ್ನು ಕರೆಸಿ ಸಭೆ ನಡೆಸದೆ ಹೊರಗುಳಿದಿದೆ.
ರಮಝಾನ್ ಪ್ರಯುಕ್ತ ಐದು ದಿನಗಳ ಸರಕಾರಿ ರಜೆ ಮುಗಿದು ರವಿವಾರ ಕಚೇರಿಗೆ ಹಾಜರಾಗಿದ್ದ ಶೋನ್ ಅಧಿಕಾರಿಗಳು ಸಂಕಷ್ಟದಲ್ಲಿರುವ ಭಾರತೀಯ ನೌಕರರ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿರಲಿಲ್ಲ. ಸೋಮವಾರ ಮತ್ತೆ ಶೋನ್‌ನಲ್ಲಿ ಸಭೆ ನಡೆಸುವ ಮಾಹಿತಿ ನೀಡಿದ ಮೇರೆಗೆ 74 ಮಂದಿ ಸಂತ್ರಸ್ತ ಭಾರತೀಯ ನೌಕರರು ಬಸ್‌ನಲ್ಲಿ ಆಗಮಿಸಿದ್ದರು. ಈ ನೌಕರರಿಂದ ಪ್ರತ್ಯೇಕವಾಗಿ ಅಹವಾಲು ಆಲಿಸುವುದಾಗಿ ಶೋನ್ ಅಧಿಕಾರಿಗಳು ತಿಳಿಸಿದ್ದರು. ಆದರೆ ಸಭೆಗೆ ಹಾಜರಾಗಲು ಉದ್ಯೋಗ ನೀಡಿದ ಕಂಪೆನಿ ಯಾವುದೇ ವಾಹನ ವ್ಯವಸ್ಥೆ ಮಾಡಿರಲಿಲ್ಲ.
ಕೊನೆಗೆ ಭಾರತೀಯ ಮೂಲದ ರಾಜ್ ಭಂಡಾರಿ ಎಂಬವರು ಬಸ್‌ನ ವ್ಯವಸ್ಥೆ ಕಲ್ಪಿಸಿದ್ದರು. ಶೋನ್‌ಗೆ ಆಗಮಿಸಿ ಸಂತ್ರಸ್ತರು ತೀವ್ರ ಉಷ್ಣಾಂಶದ ನೆಲದಲ್ಲಿ ಮೂರು ಗಂಟೆಗಳ ಕಾಲ ಕಾದರೂ ಶೋನ್ ಅಧಿಕಾರಿಗಳು ಆಗಮಿಸಿರಲಿಲ್ಲ. ಕೊನೆಗೆ ವಿಳಂಬವಾಗಿ ಆಗಮಿಸಿದ ಶೋನ್ ಅಧಿಕಾರಿಗಳು ಪ್ರತಿಯೊಬ್ಬರ ಅಹವಾಲು ಆಲಿಸದೆ ಅರ್ಧದಲ್ಲೇ ಸಭೆಯನ್ನು ಮೊಟಕುಗೊಳಿಸಿದರು ಎನ್ನಲಾಗಿದೆ.
ತಮಗೆ ಈವರೆಗಿನ ಅವಧಿಯ ವಿಳಂಬ ಮೊತ್ತವನ್ನು ನೀಡಬೇಕು. ಅಲ್ಲದೆ, ಭಾರತಕ್ಕೆ ವಾಪಸ್ ತೆರಳಲು ಟಿಕೆಟ್ ವ್ಯವಸ್ಥೆ ಮಾಡಬೇಕು. ಆದಷ್ಟು ಬೇಗ ಊರಿಗೆ ಕಳುಹಿಸುವ ಏರ್ಪಾಟು ಮಾಡುವಂತೆ ಅಹವಾಲು ಹೇಳಲು ಸಂತ್ರಸ್ತ ನೌಕರರು ನಿರ್ಧರಿಸಿದ್ದರು. ಆದರೆ ಈ ಅಹವಾಲು ಆಲಿಸಲು ಸಿದ್ಧರಿರದ ಶೋನ್ ಅಧಿಕಾರಿಗಳು, ಜೂ.11ರಂದು ಮತ್ತೆ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸುವುದಾಗಿ ತಿಳಿಸಿದ್ದರು. ಅಲ್ಲದೆ ಬೇಕಾದರೆ ಉದ್ಯೋಗ ವಂಚನೆ ಕುರಿತು ಕೇಸು ದಾಖಲಿಸುವಂತೆ ಸಂತ್ರಸ್ತರಲ್ಲಿ ಶೋನ್ ಅಧಿಕಾರಿಗಳು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೂ.2 ರಂದು ನಡೆದ ಸಭೆಯಲ್ಲಿ 53 ಭಾರತೀಯ ನೌಕರರ ಪ್ರಕರಣಗಳು ಇತ್ಯರ್ಥಪಡಿಸಲು ಸಂಬಂಧಿಸಿ ಸಂಬಂಧಪಟ್ಟವರು, ನೌಕರರು, ಕಂಪೆನಿ ಮತ್ತು ಕುವೈತ್‌ನ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಸಹಿ ಹಾಕಿದ್ದರು. ಎರಡನೇ ದಿನ ಜೂ.3ರಂದು ನಡೆಯಲಿದ್ದ ಸಭೆಯಲ್ಲಿ ಉಳಿದ ಕಾರ್ಮಿಕರ ಪ್ರಕರಣಗಳ ಇತ್ಯರ್ಥ, ಬಾಕಿ ಹಣ ಪಾವತಿ, ಪಾಸ್‌ಪೋರ್ಟ್ ಹಸ್ತಾಂತರ ನಡೆಯಬೇಕಿತ್ತು.
ಆ ಸಭೆಯನ್ನು ಜೂ.9ಕ್ಕೆ ಮುಂದೂಡಲಾಗಿತ್ತು. ಅಂದು ಸಭೆ ನಡೆಯದೆ ಮತ್ತೆ ಸಭೆ ಜೂ.10ಕ್ಕೆ ಮುಂದೂಡಿತ್ತು. ಈಗ ಜೂ.11ರಂದು ಸಭೆ ನಡೆಸುವುದಾಗಿ ಶೋನ್ ಅಧಿಕಾರಿಗಳು ಹೇಳುತ್ತಿದ್ದಾರೆ.