ಪಡುಬಿದ್ರಿ: ಗ್ರಾ.ಪಂ. ಸದಸ್ಯರಿಂದ ನವಯುಗ ಕಚೇರಿಗೆ ಮುತ್ತಿಗೆ

Update: 2019-06-10 16:01 GMT

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಅಪೂರ್ಣಕಾಮಗಾರಿಯಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತಿದ್ದು, ಕೂಡಲೇ ಕಾಮಗಾರಿಯನ್ನು  ಪೂರ್ಣಗೊಳಿಸುವಂತೆ ಒತ್ತಾಯಿಸಿ ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರು ಗುತ್ತಿಗೆದಾರ ನವಯುಗ ಕಂಪೆನಿ ಕಚೇರಿಗೆ ಮುತ್ತಿಗೆ ಹಾಕಿದರು.

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮೂರು ತಿಂಗಳಿಂದ ಸಾಮಾನ್ಯ ಸಭೆ ಇಲ್ಲದೆ ಇರುವುದರಿಂದ ಸೋಮವಾರ ಕರೆಯಲಾಗಿದ್ದ ಪಡುಬಿದ್ರಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಭಾರೀ ಚರ್ಚೆಯಾಯಿತು.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚರಂಡಿಗಳ ಸಮಸ್ಯೆ ಸೇರಿದಂತೆ ಪೇಟೆಯಲ್ಲಿನ ಹೆದ್ದಾರಿ ಅಪೂರ್ಣ ಕಾಮಗಾರಿಯ ಬಗ್ಗೆ  ಸಾರ್ವಜನಿಕರಿಂದ ಹಲವಾರು ಅರ್ಜಿಗಳು ಚರ್ಚೆಗೆ ಬಂದಿತ್ತು. ಮಳೆಗಾಲದಲ್ಲಿ  ಅನಾಹುತ ಸಂಭವಿಸುವ ಹಿನ್ನಲೆಯಲ್ಲಿ ಎಚ್ಚೆತ್ತ ಗ್ರಾಮ ಪಂಚಾಯಿತಿ  ಸದಸ್ಯರು ಕಂಪೆನಿ ಕಚೇರಿಗೆ ಆಗಮಿಸಿ ಕಾಮಗಾರಿ ಪೂರ್ಣಗೊಳಿಸದಿರುವ ಬಗ್ಗೆ ಅಸಮಾದಾನ ವ್ಯಕ್ತಪಪಡಿಸಿದರು. ಕಾಮಗಾರಿಗೆ ಸಂಬಂಧಿಸಿದ ಸಿಬ್ಬಂದಿಯನ್ನು ಸ್ಥಳಕ್ಕೆ ಆಗಮಿಸುವಂತೆ ತಾಕೀತು ಮಾಡಿದರು. ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿಯೂ ಕೆಲ ಸದಸ್ಯರು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಆಗಮಿಸಿದ ಸೈಟ್ ಇಂಜಿನಿಯರ್ ದುರ್ಗಾ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ ಸದಸ್ಯರು. ಬಾಕಿಯಿರುವ ಕಾಮಗಾರಿಗಳಾದ ಎರ್ಮಾಳು ಕಲ್ಸಂಕ ಬಳಿ ಸೇತುವೆಗೆ ಅಡ್ಡಲಾಗಿ ಮಣ್ಣುಹಾಕಿ ನಿರ್ಮಿಸಿದ ತಾತ್ಕಾಲಿಕ ರಸ್ತೆ ತೆರವು, ನಡ್ಸಾಲು ಗ್ರಾಮದ ಕೆಳಗಿನ ಪೇಟೆಯ ಮಳೆ ನೀರು ಹರಿಯುವ ಚರಂಡಿ, ಪೇಟೆಯಲ್ಲಿನ ಇಕ್ಕೆಲಗಳ ಸರ್ವೀಸ್ ರಸ್ತೆ ಹಾಗೂ ಅರ್ಧಕ್ಕೆ ನಿಲ್ಲಿಸಿರುವ ಒಳಚರಂಡಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿದರು. ಅಪೂರ್ಣವಾಗಿರುವ ಚರಂಡಿ ಕಾಮಗಾರಿಯನ್ನು ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಸಿಬ್ಬಂದಿ ತಿಳಿಸಿದರು.

ಅಧ್ಯಕ್ಷೆ ದಮಯಂತಿ ವಿ ಅಮೀನ್, ಉಪಾಧ್ಯಕ್ಷ ವೈ.ಸುಕುಮಾರ್, ಪಿಡಿಒ ಪಂಚಾಕ್ಷರಿ ಸ್ವಾಮಿ ಕೇರಿಮಠ ಸಹಿತ ಸದಸ್ಯರೆಲ್ಲರೂ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News