×
Ad

ಉಳ್ಳಾಲ : ಪ್ರಕ್ಷುಬ್ದಗೊಂಡ ಕಡಲು; ಹಲವಾರು ಮನೆಗಳು ಅಪಾಯದಂಚಿನಲ್ಲಿ

Update: 2019-06-10 21:50 IST

ಉಳ್ಳಾಲ: ಮಳೆಗಾಲ ಆರಂಭಗೊಳ್ಳುತ್ತಿರುವಂತೆಯೇ ಉಳ್ಳಾಲ ಸೇರಿದಂತೆ ಸೋಮೇಶ್ವರ, ಉಚ್ಚಿಲ ಸಮುದ್ರ ತೀರದಲ್ಲಿ  ಕಡಲ್ಕೊರೆತದ ಅಬ್ಬರ ಆರಂಭಗೊಂಡಿದ್ದು ಸುಮಾರು 50 ಕ್ಕೂ ಹೆಚ್ಚು ಮನೆಗಳು ಅಪಾಯದ ಅಂಚಿನಲ್ಲಿದ್ದು, ಕಡಲ ತಡಿಯ ಜನರು ಆತಂಕಗೊಂಡಿದ್ದಾರೆ.

ಉಳ್ಳಾಲ ವ್ಯಾಪ್ತಿಯ ಮೊಗವೀರಪಟ್ಣ ಮತ್ತು ಉಳ್ಳಾಲಕೋಡಿ ಸಂಪರ್ಕಿಸುವ ಸೋಲಾರ್ ಕ್ಲಬ್ ಬಳಿ, ಕೈಕೋ, ಕಿಲೇರಿಯಾನಗರ, ಸೀಗ್ರೌಂಡ್ ಪ್ರದೇಶದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದು ಅಪಾಯದ ಅಂಚಿನಲ್ಲಿವೆ. ಅಲ್ಲದೆ  ಸಮ್ಮರ್ ಸ್ಯಾಂಡ್ ಬೀಚ್‍ನ ತಡೆಗೋಡೆ ಸಮುದ್ರಪಾಲಾಗಿದ್ದು, ಕಟ್ಟಡವೊಂದು ಬಿರುಕು ಬಿಟ್ಟು ಅಪಾಯದಲ್ಲಿದೆ.

ಕೈಕೋ ಮತ್ತು ಕಿಲೇರಿಯಾ ನಗರದಲ್ಲಿ ಮಸೀದಿಗಳು ಅಪಾಯದಲ್ಲಿವೆ. ಮೊಗವೀರಪಟ್ಣ ಬೀಚ್ ಬಳಿ ಯಾವುದೇ ಹಾನಿಯಾಗದಿದ್ದರೂ ಕೆಲವು  ಕಡೆ ಬೀಚ್ ಪ್ರದೇಶ ಸಮುದ್ರ ಪಾಲಾಗಿದೆ. ಕೈಕೋ ಕಿಲೇರಿಯಾ ನಗರದಲ್ಲಿ ತಾತ್ಕಾಲಿಕ ತಡೆಗೋಡೆ ಸಮುದ್ರ ಪಾಲಾಗುತ್ತಿದ್ದು ಸಮಸ್ಯೆ ಇರುವ ಪ್ರದೇಶಗಳಲ್ಲಿ ಕಲ್ಲು ಹಾಕುವ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ ಸ್ಥಳೀಯ ಕೌನ್ಸಿಲರ್‍ಗಳಾದ ಬಶೀರ್, ಮಹಮ್ಮದ್ ಮುಕ್ಕಚ್ಚೇರಿ ಇದ್ದರು.

ಉಚ್ಚಿಲದಲ್ಲೂ ಹಲವಾರು ಮನೆಗಳು ಅಪಾಯದಂಚಿನಲ್ಲಿ

ಉಚ್ಚಿಲದ ಫೆರಿಬೈಲು ಬಳಿ ಸಮುದ್ರ ಕೊರೆತದಿಂದ ಸುಮಾರು 10ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. ಸ್ಥಳಕ್ಕೆ ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ, ತಾ. ಪಂ. ಸದಸ್ಯ ರವಿಶಂಕರ್ ಸೋಮೆಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News