‘ಆಯುಷ್ಮಾನ್ ಭಾರತ’ ಯೋಜನೆ ಕೇವಲ ಬೊಗಳೆ: ಆಪ್

Update: 2019-06-10 17:05 GMT

 ಹೊಸದಿಲ್ಲಿ, ಜೂ.10: ಕೇಂದ್ರ ಸರಕಾರದ ‘ಆಯುಷ್ಮಾನ್ ಭಾರತ’ ಯೋಜನೆ ಕೇವಲ ‘ಬೊಗಳೆ’ ಎಂದು ಆಮ್ ಆದ್ಮಿ ಪಕ್ಷವು ಸೋಮವಾರ ಟೀಕಿಸಿದೆ.

 ‘‘ಕೇಂದ್ರ ಸಚಿವ ಹರ್ಷವರ್ಧನ್ ಅವರು ದಿಲ್ಲಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಜಾರಿಗೊಳಿಸಲು ಬಯಸಿದ್ದಾರೆ. ಆದರೆ ನಿಮ್ಮ ಬಳಿ ಫ್ರಿಜ್,ಸ್ಕೂಟರ್ ‌ಅಥವಾ ದ್ವಿಚಕ್ರ ವಾಹನವಿದ್ದರೆ ಅಥವಾ ನಿಮ್ಮ ಆದಾಯ 10 ಸಾವಿರಕ್ಕಿಂತ ಅಧಿಕವಿದ್ದರೆ ಕೇಂದ್ರ ಸರಕಾರ ಈ ಯೋಜನೆಯಡಿ ನಿಮಗೆ ಚಿಕಿತ್ಸೆ ಒದಗಿಸುವುದಿಲ್ಲ. ನಿಮ್ಮ ಆದಾಯ 10 ಸಾವಿರಕ್ಕಿಂತ ಕಡಿಮೆಯಿದ್ದಲ್ಲಿ ಹಾಗೂ ಈ ಎಲ್ಲಾ ಸೌಕರ್ಯಗಳು ನಿಮ್ಮ ಬಳಿ ಇರದಿದ್ದಲ್ಲಿ ಮಾತ್ರ ನಿಮಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತದೆ’’ ಎಂದು ಎಎಪಿ ವಕ್ತಾರ ಸೌರಭ್ ಭಾರಧ್ವಾಜ್ ಅವರು ವಿಡಿಯೋ ಸಂದೇಶವೊಂದರಲ್ಲಿ ತಿಳಿಸಿದ್ದಾರೆ.

 ಇದಕ್ಕೆ ಬದಲಾಗಿ ದಿಲ್ಲಿ ಸರಕಾರ ಆರೋಗ್ಯ ಯೋಜನೆಯಡಿಯಲ್ಲಿ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಆದಾಯ ಹಾಗೂ ಇತರ ಸೌಲಭ್ಯಗಳನ್ನು ಗಣನೆಗೆ ತೆಗೆದುಕೊಳ್ಳದೆಯೇ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಸೌರಭ್ ತಿಳಿಸಿದ್ದಾರೆ. ಪಶ್ಚಿಮಬಂಗಾಳ, ತೆಲಂಗಾಣ, ಒಡಿಶಾ ಹಾಗೂ ದಿಲ್ಲಿ ಸೇರಿದಂತೆ ಕೆಲವು ರಾಜ್ಯಗಳು ಕೇಂದ್ರ ಸರಕಾರದ ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿಗೊಳಿಸಿಲ್ಲ.

   ‘ಆಯುಷ್ಮಾನ್ ಭಾರತ್’ ಯೋಜನೆಯು ಬಿಜೆಪಿ ಆಡಳಿತದ ಹರ್ಯಾಣ ಹಾಗೂ ಉತ್ತರಪ್ರದೇಶಗಳಲ್ಲಿ ಜಾರಿಯಲ್ಲಿದೆ. ಒಂದು ಆಯುಷ್ಮಾನ್ ಭಾರತ ಯೋಜನೆ ತುಂಬಾ ಉತ್ತಮವಾಗಿದ್ದಲ್ಲಿ ದಿಲ್ಲಿ ಸರಕಾರದ ಆಸ್ಪತ್ರೆಗಳಲ್ಲಿ ಅರ್ಧಾಂಶಕ್ಕಿಂತಲೂ ಅಧಿಕ ರೋಗಿಗಳು ಹರ್ಯಾಣ ಹಾಗೂ ಉತ್ತರಪ್ರದೇಶಗಳಿಂದ ಯಾಕೆ ಬರುತ್ತಿದ್ದಾರೆ ಎಂಬುದಾಗಿ ಅವರು ಪ್ರಶ್ನಿಸಿದ್ದಾರೆ.

 “ಬಿಜೆಪಿ ನಿಯಂತ್ರಣದಲ್ಲಿರುವ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರವು ದಿಲ್ಲಿ ಸರಕಾರದ ಒಂದೇ ಒಂದು ಮೊಹಲ್ಲಾ ಕ್ಲಿನಿಕ್ ಸ್ಥಾಪನೆಗೆ ಜಮೀನು ನೀಡಿಲ್ಲವೆಂದು ಭಾರದ್ವಾಜ್ ದೂರಿದರು. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ದಿಲ್ಲಿ ಜನತೆಯ ಕ್ಷೇಮದ ಬಗ್ಗೆ ಕಾಳಜಿಯಿರುವುದಾದರೆ ಅವರು ಮೊಹಲ್ಲಾ ಕ್ಲಿನಿಕ್‌ಗಳ ಸ್ಥಾಪನೆಗೆ ನಿವೇಶನ ಮಂಜೂರುಗೊಳಿಸಲಿ’’ ಎಂದು ಅವರು ಸವಾಲೊಡ್ಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News