×
Ad

ದೇರಳಕಟ್ಟೆ : ಯೆನೆಪೋಯ ಸಹಭಾಗಿತ್ವದೊಂದಿಗೆ ಇಎಸ್‍ಐಸಿ ಚಿಕಿತ್ಸಾಲಯ ಉದ್ಘಾಟನೆ

Update: 2019-06-10 23:16 IST

ಉಳ್ಳಾಲ: ರೋಗಿಗಳ ಜೊತೆಗೆ ವೈದ್ಯರು ಹಾಗೂ ತಂತ್ರಜ್ಞರು ಉತ್ತಮ ಬಾಂಧವ್ಯವನ್ನು ಇರಿಸುವ ಮೂಲಕ ಡಿಸ್ಪೆನ್ಸರಿಯಲ್ಲಿ ವಿಶ್ವಾಸವನ್ನು ಹೆಚ್ಚಿಸಬೇಕಿದೆ ಎಂದು ಮಂಗಳೂರು ಇಎಸ್ ಐ ಕಾರ್ಪೊರೇಷನ್‍ನ ಎಸ್‍ಆರ್ ಒ ಇದರ ಆಡಳಿತ ನಿರ್ದೇಶಕ ಎಸ್.ಶಿವರಾಮಕೃಷ್ಣನ್  ಹೇಳಿದರು.

ಅವರು ದೇರಳಕಟ್ಟೆ ನಿತ್ಯಾನಂದನಗರದ ಝುಲೇಖಾ ಭವನ ಕಟ್ಟಡದಲ್ಲಿ ಯೆನೆಪೋಯ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾಲಯ ನಿರ್ವಹಿಸಲ್ಪಡುವ  ಇಎಸ್‍ಐ ಕಾರ್ಪೊರೇಷನ್  ಇದರ ಅತ್ಯಾಧುನಿಕ ಉದ್ಯೋಗದಾತರ ಬಳಕೆ ಔಷಧಾಲಯದ ಉದ್ಘಾಟನಾ  ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ದೇರಳಕಟ್ಟೆಯಲ್ಲಿ ಯೆನೆಪೋಯ ಆಸ್ಪತ್ರೆಯಿಂದ ನಿರ್ವಹಿಸಲ್ಪಡುವ ಇಎಸ್‍ಐ ಕಾರ್ಪೊರೇಷನ್ ಡಿಸ್ಪೆನ್ಸರಿ  ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿದೆ. ಮೂರು ತಿಂಗಳಲ್ಲಿ ನಾಲ್ಕನೇ ಘಟಕವನ್ನು ತೆರೆಯಲಾಗಿದೆ. ಈ ಪೈಕಿ ದೇರಳಕಟ್ಟೆ ಅತಿ ದೊಡ್ಡ ಡಿಸ್ಪೆನ್ಸರಿಯಾಗಿದೆ.  ಕರ್ನಾಟಕದಾದ್ಯಂತ 9 ಕಡೆಗಳಲ್ಲಿ ಡಿಸ್ಪೆನ್ಸರಿಗಳು ಕಾರ್ಯಾಚರಿಸುತ್ತಿದೆ. ಜಿಲ್ಲೆಯಲ್ಲಿ ಮೂಡಬಿದ್ರೆ, ಸುಳ್ಯ, ಉಜಿರೆ ಸೇರಿದಂತೆ ಇದೀಗ ದೊಡ್ಡದಾಗಿ ದೇರಳಕಟ್ಟೆಯಲ್ಲಿ ಕಾರ್ಯಾರಂಭಗೊಂಡಿದೆ.  ದೇರಳಕಟ್ಟೆ, ಉಳ್ಳಾಲ ಭಾಗದಲ್ಲಿ 7,000 ಕುಟುಂಬಗಳಿಗೆ ಘಟಕ ಸಹಕಾರಿಯಾಗಲಿದೆ ಎಂದರು.

ಡಿಸ್ಪೆನ್ಸರಿ ಉದ್ಘಾಟಿಸಿದ ಯೆನೆಪೋಯ ಸ್ವಾಯುತ್ತೆಗೊಳ್ಳಲಿರುವ ವಿ.ವಿ ಉಪಕುಲಪತಿ ಡಾ.ಎಂ ವಿಜಯಕುಮಾರ್ ಮಾತನಾಡಿ ಜಿಲ್ಲೆಯ ನಾಲ್ಕು ಕಡೆಗಳಲ್ಲಿರುವ ಡಿಸ್ಪೆನ್ಸರಿಗಳ ಪೈಕಿ  ದೇರಳಕಟ್ಟೆಯ ಘಟಕ ದೊಡ್ಡ ಮಟ್ಟಿನಲ್ಲಿವೆ. ಪಿಪಿಪಿ ಮಾದರಿಯಲ್ಲಿ ಯೆನೆಪೋಯ ಸಂಸ್ಥೆ ನಿರ್ವಹಿಸಲು  ಬದ್ಧ.  ಮುಂದೆಯೂ ಘಟಕ ಯಶಸ್ವಿಯಾಗಿ ನಿರ್ವಹಿಸಲು ಎಲ್ಲಾ ರೀತಿಯ ಸಹಕಾರವನ್ನು ಒದಗಿಸಲಾಗುವುದು ಎಂದರು. 

ಈ ಸಂದರ್ಭ ಯೆನೆಪೋಯ ವಿ.ವಿ ಕುಲಸಚಿವ ಡಾ. ಗಂಗಾಧರ ಸೋಮಯಾಜಿ, ಹಣಕಾಸು ಅಧಿಕಾರಿ ಮಹಮದ್ ಭಾವ, ಮಾನವ ಸಂಪನ್ಮೂಲ ಅಧಿಕಾರಿ ಮಹಾಬಲ ಆಳ್ವ  ಮುಂತಾದವರು ಉಪಸ್ಥಿತರಿದ್ದರು.

ಸೇವೆಗಳು : ಇಎಸ್‍ಐಸಿಯು ತನ್ನ ಪಾಲುದಾರರಿಗೆ ಒದಗಿಸುವ ಸೇವೆಗಳನ್ನು ಸುಧಾರಿಸಲು ಮತ್ತು ಇದರ ಸೇವೆಗಳನ್ನು ಪಾಲುದಾರರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ತನ್ನ ಪ್ರಮುಖ ಉದ್ಯೋಗದಾತರ ಸಹಭಾಗಿತ್ವದಲ್ಲಿ ಚಿಕಿತ್ಸಾಲಯಗಳನ್ನು ತೆರೆಯುತ್ತಿದೆ. ರಾಜ್ಯ ಸರ್ಕಾರದಿಂದ ನೆಡೆಸಲ್ಪಡುವ ಇಎಸ್‍ಐ ಚಿಕಿತ್ಸಾಲಯಗಳು ಗ್ರಾಮೀಣ ಭಾಗದವರಿಗೂ ದೊರೆಯುವ ನಿಟ್ಟಿನಲ್ಲಿ ಸ್ಥಾಪನೆ. ಈ ಚಿಕಿತ್ಸಾಲಯದಲ್ಲಿ ಮೂಲಭೂತ ರೋಗನಿರ್ಣಯ ಪರೀಕ್ಷೆಗಳನ್ನು ಮಾಡಲಾಗುವುದು. ಪ್ರಸ್ತುತ ಚಿಕಿತ್ಸಾಲಯವನ್ನು ಒಳಗೊಂಡು, ಒಟ್ಟು 4 ಚಿಕಿತ್ಸಾಲಯಗಳನ್ನು ಇಎಸ್‍ಐಸಿ ಯು ತನ್ನ ವ್ಯಾಪ್ತಿಯಲ್ಲಿ ಬರುವ  ಮೂಡಬಿದ್ರಿ, ಸುಳ್ಯ, ಉಜಿರೆ ಮತ್ತು ದೇರಳಕಟ್ಟೆಯಲ್ಲಿ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಪ್ರಾರಂಭಿಸಿದೆ. ಈ ಎಲ್ಲಾ ಚಿಕಿತ್ಸಾಲಯಗಳು ಇಎಸ್‍ಐಸಿಯ ಯೋಜನೆಯಾದ  "ಮಾರ್ಪಡಿಸಿದ ಉದ್ಯೋಗದಾತರ ಉಪಯೋಗಿ ಚಿಕಿತ್ಸಾಲಯ" ಯೋಜನೆ ಅಡಿಯಲ್ಲಿ ಸ್ಥಾಪಿಸಲಾಗಿದೆ. ಚಿಕಿತ್ಸಾಲಯವು ಮೂಲಭೂತ ವೈದ್ಯಕೀಯ ಚಿಕಿತ್ಸೆ ಹಾಗೂ ಸಮಾಲೋಚನೆಯ ಸೇವೆಗಳನ್ನು ಇ.ಎಸ್.ಐ ಯೋಜನೆಯ ವ್ಯಾಪ್ತಿಯಲ್ಲಿನ ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ಒದಗಿಸಲಿದೆ. ಮಾತ್ರವಲ್ಲದೇ, ಇ.ಎಸ್.ಐ ಯೋಜನೆಗೊಳಪಟ್ಟ ಉದ್ಯೋಗಿಗಳು ಅನಾರೋಗ್ಯ, ಮಾತೃತ್ವದ ಸಂದರ್ಭಗಳಲ್ಲಿನ ವಿವಿಧ ಧೃಡೀಕರಣ ಪತ್ರಗಳನ್ನು  ಚಿಕಿತ್ಸಾಲಯದಲ್ಲಿ ಪಡೆಯಬಹುದು. ಬೆಳಗ್ಗೆ 9 ರಿಂದ ಮಧ್ಯಾಹ್ನ 1.30 ರವರೆಗೆ ಹಾಗೂ ಅಪರಾಹ್ನ 2.30 ಗಂಟೆಯಿಂದ ಸಂಜೆ 5.30 ಘಂಟೆಯವರೆಗೆ, ರವಿವಾರ ಮತ್ತು ಸರ್ಕಾರಿ ರಜೆಯನ್ನು ಹೊರತುಪಡಿಸಿ, ವಾರದ ಎಲ್ಲಾ ದಿನ ತೆರೆದಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News