ಹಾಂಕಾಂಗ್: ಗಡಿಪಾರು ಮಸೂದೆ ವಿರೋಧಿಸಿ ಲಕ್ಷಾಂತರ ಜನರು ಬೀದಿಗೆ

Update: 2019-06-10 17:54 GMT

ಹಾಂಕಾಂಗ್, ಜೂ. 10: ಪ್ರಸ್ತಾಪಿತ ಗಡಿಪಾರು ಕಾನೂನನ್ನು ವಿರೋಧಿಸಿ ರವಿವಾರ ರಾತ್ರಿ ಲಕ್ಷಾಂತರ ಜನರು ಹಾಂಕಾಂಗ್‌ನ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ಹಾಂಕಾಂಗ್‌ನ ಆರೋಪಿಗಳನ್ನು ವಿಚಾರಣೆ ಎದುರಿಸುವುದಕ್ಕಾಗಿ ಚೀನಾಕ್ಕೆ ಗಡಿಪಾರು ಮಾಡಲು ಈ ಕಾನೂನು ಅವಕಾಶ ನೀಡುತ್ತದೆ.

10,30,000 ಜನರು ಹಾಂಕಾಂಗ್‌ನ ಬೀದಿಗಳಲ್ಲಿ 7 ಗಂಟೆಗಳ ಕಾಲ ಪ್ರತಿಭಟನಾ ಮೆರವಣಿಗೆ ನಡೆಸಿದರು ಎಂದು ಸಂಘಟಕರು ಹೇಳಿದ್ದಾರೆ. ಈ ಸಂಖ್ಯೆಯು 2003ರಲ್ಲಿ ಹಾಂಕಾಂಗ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಜನರಿಗಿಂತ ದುಪ್ಪಟ್ಟಾಗಿದೆ.

2003ರಲ್ಲಿ, ಕಠಿಣ ರಾಷ್ಟ್ರೀಯ ಭದ್ರತೆ ಕಾನೂನುಗಳನ್ನು ಜಾರಿಗೊಳಿಸುವ ಸರಕಾರದ ಉದ್ದೇಶವನ್ನು ಪ್ರಶ್ನಿಸಿ ಜನರು ಬೀದಿಗಿಳಿದಿದ್ದರು. ಆ ಬೃಹತ್ ಪ್ರತಿಭಟನೆಯ ಬಳಿಕ ಸರಕಾರ ತನ್ನ ಯೋಜನೆಯಿಂದ ಹಿಂದೆ ಸರಿದಿತ್ತು.

ಆದಾಗ್ಯೂ, ರವಿವಾರದ ಪ್ರತಿಭಟನಾ ಮೆರವಣಿಗೆಯಲ್ಲಿ ಸುಮಾರು 2,40,000 ಜನರು ಭಾಗವಹಿಸಿದ್ದಾರೆ ಎಂಬುದಾಗಿ ಪೊಲೀಸ್ ವಕ್ತಾರರೊಬ್ಬರು ಹೇಳಿದರು.

ಈ ಜನಸಾಗರವು ಹಾಂಕಾಂಗ್‌ನ ಆಡಳಿತಗಾರ್ತಿ ಕ್ಯಾರೀ ಲ್ಯಾಮ್ ಮತ್ತು ಅವರ ಬೀಜಿಂಗ್‌ನ ಧಣಿಗಳ ಮೇಲೆ ಭಾರೀ ಒತ್ತಡ ಸೃಷ್ಟಿಸಿದೆ.

‘‘ಅವರು (ಕ್ಯಾರೀ ಲ್ಯಾಮ್) ಈ ಮಸೂದೆಯನ್ನು ವಾಪಸ್ ಪಡೆದುಕೊಂಡು ರಾಜೀನಾಮೆ ನೀಡಬೇಕು’’ ಎಂದು ಡೆಮಾಕ್ರಟಿಕ್ ಪಾರ್ಟಿ ಸಂಸದ ಜೇಮ್ಸ್, ನಗರದ ಸಂಸತ್ತಿನ ಹೊರಗಡೆ ನೆರೆದ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

‘‘ಇಡೀ ಹಾಂಕಾಂಗ್ ಅವರ ವಿರುದ್ಧವಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News