ಬ್ರೆಕ್ಸಿಟ್ ಒಪ್ಪಂದ ಮರುಪರಿಶೀಲನೆಗೆ ಐರೋಪ್ಯ ಒಕ್ಕೂಟ ಸಿದ್ಧ

Update: 2019-06-10 17:58 GMT

ಲಂಡನ್, ಜೂ. 10: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಗೆ ಬರುವುದಕ್ಕೆ (ಬ್ರೆಕ್ಸಿಟ್) ಸಂಬಂಧಿಸಿದ ಒಪ್ಪಂದದ ಬಗ್ಗೆ ಮರು ಸಂಧಾನ ನಡೆಸಲು ಐರೋಪ್ಯ ಒಕ್ಕೂಟ ಸಿದ್ಧವಿದೆ ಎಂಬ ಇಂಗಿತವನ್ನು ಜರ್ಮನ್ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ವ್ಯಕ್ತಪಡಿಸಿದ್ದಾರೆ ಎಂದು ಬ್ರಿಟನ್ ವಿದೇಶ ಕಾರ್ಯದರ್ಶಿ ಜೆರೆಮಿ ಹಂಟ್ ರವಿವಾರ ಹೇಳಿದ್ದಾರೆ.

ಬ್ರಿಟನ್ ಪ್ರಧಾನಿ ತೆರೇಸಾ ಮೇ ರಾಜೀನಾಮೆ ನೀಡಲಿರುವ ಹಿನ್ನೆಲೆಯಲ್ಲಿ, ಅವರ ಸ್ಥಾನಕ್ಕೆ ಹಂಟ್ ಓರ್ವ ಸ್ಪರ್ಧಿಯೂ ಆಗಿದ್ದಾರೆ. ಪ್ರಧಾನಿ ಸ್ಥಾನಕ್ಕೆ ಕನ್ಸರ್ವೇಟಿವ್ ಪಕ್ಷದಲ್ಲಿ 10ಕ್ಕೂ ಹೆಚ್ಚು ಸ್ಪರ್ಧಿಗಳಿದ್ದಾರೆ.

ಕಳೆದ ವಾರ ಫ್ರಾನ್ಸ್‌ನಲ್ಲಿ ನಡೆದ ‘ಡಿ-ಡೇ’ ಸಂಸ್ಮರಣಾ ಕಾರ್ಯಕ್ರಮದಲ್ಲಿ ನಾನು ಮರ್ಕೆಲ್ ಜೊತೆ ಮಾತನಾಡಿದೆ ಹಾಗೂ ತೆರೇಸಾ ಮೇ ರೂಪಿಸಿರುವ ಒಪ್ಪಂದದಲ್ಲಿ ಬದಲಾವಣೆ ಮಾಡಬಹುದು ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದರು ಎಂದು ಹಂಟ್ ಹೇಳಿದರು.

‘‘ಹೊಸ ಬ್ರಿಟಿಶ್ ಪ್ರಧಾನಿ ತರುವ ಯಾವುದೇ ಯೋಜನೆಯನ್ನು ಪರಿಶೀಲಿಸಲು ನಾವು ಸಿದ್ಧರಿದ್ದೇವೆ ಎಂಬುದಾಗಿ ಅವರು ಹೇಳಿದರು’’ ಎಂದು ಹಂಟ್ ‘ಸ್ಕೈ ನ್ಯೂಸ್’ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News