ಸುಡಾನ್: ಸೇನೆ ವಿರುದ್ಧ ನಾಗರಿಕ ಅಸಹಕಾರ ಚಳವಳಿ

Update: 2019-06-10 18:01 GMT

ಖಾರ್ತೂಮ್ (ಸುಡಾನ್), ಜೂ. 10: ಸುಡಾನ್‌ನಲ್ಲಿ ರವಿವಾರ ಸೇನೆಯ ವಿರುದ್ಧ ನಾಗರಿಕ ಅಸಹಕಾರ ಚಳವಳಿ ಆರಂಭಿಸಿದ ಪ್ರಜಾಪ್ರಭುತ್ವ ಪರ ಪ್ರತಿಭಟನಕಾರರ ವಿರುದ್ಧ ಸೇನೆ ನಡೆಸಿದ ದಮನ ಕಾರ್ಯಾಚರಣೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ದೇಶದ ಆಡಳಿತವನ್ನು ನಾಗರಿಕ ಸರಕಾರವೊಂದಕ್ಕೆ ಹಸ್ತಾಂತರಿಸಬೇಕೆಂದು ಪ್ರತಿಭಟನಕಾರರು ಸೇನೆಯನ್ನು ಒತ್ತಾಯಿಸುತ್ತಿದ್ದಾರೆ.

ರಾಜಧಾನಿ ಖಾರ್ತೂಮ್‌ನ ಮಧ್ಯ ಭಾಗದಲ್ಲಿರುವ ಸೇನಾ ಪ್ರಧಾನ ಕಚೇರಿಯ ಹೊರಗೆ ಧರಣಿ ನಡೆಸುತ್ತಿದ್ದ ಜನರ ಮೇಲೆ ಸೇನೆಯು ಭೀಕರ ದಮನ ಕಾರ್ಯಾಚರಣೆ ನಡೆಸಿದ ಒಂದು ವಾರದ ಬಳಿಕ ನಾಗರಿಕ ಅಸಹಕಾರ ಚಳವಳಿ ಆರಂಭಗೊಂಡಿದೆ.

ನಾಗರಿಕ ಅಸಹಕಾರ ಚಳವಳಿಗೆ ಪ್ರತಿಭಟನಕಾರರು ಕರೆ ನೀಡಿದ ಹಿನ್ನೆಲೆಯಲ್ಲಿ, ಖಾರ್ತೂಮ್‌ನಲ್ಲಿ ಜನರು ರಸ್ತೆ ತಡೆಗಳನ್ನು ನಿರ್ಮಿಸುತ್ತಾ ಸಾಗಿದರು. ದೇಶದ ಇತರ ಹಲವಾರು ನಗರಗಳು ಮತ್ತು ಪಟ್ಟಣಗಳಲ್ಲಿ ಮಾರುಕಟ್ಟೆಗಳು ಮತ್ತು ಅಂಗಡಿಗಳು ಮುಚ್ಚಿದವು.

ಖಾರ್ತೂಮ್‌ನಲ್ಲಿ ನಡೆದ ಘರ್ಷಣೆಯಲ್ಲಿ ರವಿವಾರ ಇಬ್ಬರು ಮೃತಪಟ್ಟರು ಹಾಗೂ ಅವಳಿ ನಗರ ಓಮ್‌ಡರ್‌ಮನ್‌ನಲ್ಲಿ ಇತರ ಇಬ್ಬರು ಹತರಾದರು ಎಂದು ಪ್ರತಿಭಟನಕಾರರೊಂದಿಗೆ ಇರುವ ವೈದ್ಯರ ಸಮಿತಿಯೊಂದು ಹೇಳಿದೆ.

ಈ ನಾಲ್ಕು ಸಾವುಗಳಿಗೆ ಆಡಳಿತಾರೂಢ ಸೇನಾ ಮಂಡಳಿಯ ಪಡೆಗಳು ಮತ್ತು ಅರೆಸೈನಿಕ ಪಡೆಗಳು ಕಾರಣ ಎಂದು ‘ಸೆಂಟ್ರಲ್ ಕಮಿಟಿ ಫಾರ್ ಸುಡಾನೀಸ್ ಡಾಕ್ಟರ್ಸ್’ ತಿಳಿಸಿದೆ.

ಇದರೊಂದಿಗೆ ಜೂನ್ 3ರಂದು ಧರಣಿ ನಿರತರನ್ನು ಚದುರಿಸುವುದಕ್ಕಾಗಿ ಅವರ ವಿರುದ್ಧ ನಡೆಸಿದ ಸೇನಾ ಕಾರ್ಯಾಚರಣೆಯ ಬಳಿಕ ಮೃತಪಟ್ಟವರ ಸಂಖ್ಯೆ 118ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News