ಝಾಕಿರ್ ನಾಯ್ಕ್ ರನ್ನು ಗಡೀಪಾರು ಮಾಡದೇ ಇರುವ ಹಕ್ಕು ನಮಗಿದೆ: ಮಲೇಷ್ಯಾ ಪ್ರಧಾನಿ

Update: 2019-06-11 09:05 GMT

ಕೌಲಾಲಂಪುರ್, ಜೂ.11: ಭಾರತದಲ್ಲಿ ನ್ಯಾಯಯುತ ವಿಚಾರಣೆ ನಡೆಯುವ ಭರವಸೆ ತಮಗಿಲ್ಲ ಎಂದು ಹೇಳಿರುವ ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ಅವರನ್ನು ಗಡೀಪಾರು ಮಾಡದೇ ಇರುವ ಹಕ್ಕು ತಮ್ಮ ದೇಶಕ್ಕಿದೆ ಎಂದು ಮಲೇಷ್ಯಾ ಪ್ರಧಾನಿ ಮಹತಿರ್ ಮುಹಮ್ಮದ್ ಹೇಳಿದ್ದಾರೆ.

ಭಾರತವನ್ನು 2016ರಲ್ಲಿ ತೊರೆದ ಝಾಕಿರ್ ನಾಯ್ಕ್ ನಂತರ ಮಲೇಷ್ಯಾಕ್ಕೆ ತೆರಳಿ ಅಲ್ಲಿ ಖಾಯಂ ಆಗಿ ನೆಲೆಸಲು ಅನುಮತಿ ಪಡೆದಿದ್ದಾರೆ.

ಮೊಂಗೋಲಿಯಾದ ಮಾಡೆಲ್ ಕೊಲೆ ಪ್ರಕರಣದಲ್ಲಿ ಮಲೇಷ್ಯಾದಲ್ಲಿ  2015ರಲ್ಲಿ ಮರಣದಂಡನೆ  ವಿಧಿಸಲ್ಪಟ್ಟ ಮಾಜಿ ಪೊಲೀಸ್ ಕಮಾಂಡೊ ಸಿರುಲ್ ಅಝರ್ ಉಮರ್ ಅವರನ್ನು ಆಸ್ಟ್ರೇಲಿಯಾ ಗಡೀಪಾರುಗೊಳಿಸಲು ನಿರಾಕರಿಸಿದ ಸನ್ನಿವೇಶವನ್ನು ಈಗಿನ ಸನ್ನಿವೇಶಕ್ಕೆ ಹೋಲಿಸಿದ ಪ್ರಧಾನಿ ಮಹತಿರ್, “ನಾವು ಸಿರುಲ್ ಗಡೀಪಾರಿಗೆ ಆಸ್ಟ್ರೇಲಿಯಾವನ್ನು ವಿನಂತಿಸಿದ್ದೆವು. ಆದರೆ ನಾವು ಅವರನ್ನು ಗಲ್ಲಿಗೇರಿಸಬಹುದೆಂಬ ಭಯ ತಮಗಿದೆ ಎಂದು ಅವರು ಹೇಳಿದ್ದರು'' ಎಂದರು.

ಎನ್‍ಐಎ ಝಾಕಿರ್ ನಾಯ್ಕ್ ವಿರುದ್ಧ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆಯನ್ವಯ ಎಫ್‍ಐಆರ್ ದಾಖಲಿಸಿದ ನಂತರ 2016ರಲ್ಲಿ ಜಾರಿ ನಿರ್ದೇಶನಾಲಯ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು.

ದ್ವೇಷದ ಭಾಷಣ ಹಾಗೂ ಮುಸ್ಲಿಂ ಯುವಕರಿಗೆ ಉಗ್ರವಾದ ಕೈಗೆತ್ತಿಕೊಳ್ಳುವಂತೆ ಪ್ರೇರೇಪಿಸುವ ಅವರ ಟಿವಿ ಭಾಷಣಗಳಿಗಾಗಿ ಅಪರಿಚಿತ ದೇಶೀಯ ಹಾಗೂ ವಿದೇಶಿ ``ಹಿತೈಷಿಗಳಿಂದ''  ಅವರ  ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ನ ಮುಂಬೈ ಮೂಲದ ಚಾರಿಟಿ ಟ್ರಸ್ಟ್ ನ ಬ್ಯಾಂಕ್ ಖಾತೆಗಳಲ್ಲಿ ಕೋಟಿಗಟ್ಟಲೆ ಹಣ  ಜಮೆಯಾಗಿದೆ ಎಂದು ಕಳೆದ ತಿಂಗಳು ಜಾರಿ ಏಜನ್ಸಿ ಆರೋಪಿಸಿತ್ತು. ಈ ಹಣ ಯುಎಇ, ಸೌದಿ ಅರೇಬಿಯಾ, ಕುವೈತ್, ಬಹ್ರೈನ್, ಓಮನ್, ಮಲೇಷ್ಯಾ ಮುಂತಾದ ರಾಷ್ಟ್ರಗಳಿಂದ ಹರಿದು ಬಂದಿದೆ ಎಂದೂ ಆರೋಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News