​ಅರಬ್ಬಿ ಸಮುದ್ರದಲ್ಲಿ ‘ವಾಯು’ ಚಂಡಮಾರುತ

Update: 2019-06-11 14:57 GMT

ಮಂಗಳೂರು, ಜೂ.11: ಅರಬ್ಬಿ ಸಮುದ್ರದಲ್ಲಿ ಕಂಡು ಬಂದಿರುವ ವಾಯುಭಾರ ಕುಸಿತವು ‘ವಾಯು’ ಚಂಡಮಾರುತವಾಗಿ ಪರಿವರ್ತನೆ ಹೊಂದಿದ್ದು, ಕರಾವಳಿ ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆಯಿದೆ.

ವಾಯುಭಾರ ಕುಸಿತವಾಗಿ ಉಂಟಾಗಿರುವ ‘ವಾಯು’ ಚಂಡಮಾರುತವು ಮಂಗಳವಾರ ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ಪ್ರತಿಗಂಟೆಗೆ 13 ಕಿ.ಮೀ.ನಂತೆ ವೇಗದಲ್ಲಿ ಬೀಸುತ್ತಿದ್ದು, ಚಂಡಮಾರುತವು ಉತ್ತರ ದಿಕ್ಕಿನಿಂದ ವಾಯವ್ಯ ಭಾಗಕ್ಕೆ ಸಾಗಿದೆ. ಅರಬ್ಬಿ ಸಮುದ್ರದ ಪೂರ್ವ ಕೇಂದ್ರಭಾಗದಲ್ಲಿ ಈ ಚಂಡಮಾರುತ ಕಾಣಿಸಿಕೊಂಡಿದೆ.

‘ವಾಯು’ ಚಂಡಮಾರುತವು ಗೋವಾದ ಪಶ್ಚಿಮ ವಾಯವ್ಯ ಭಾಗದಿಂದ 340 ಕಿ.ಮೀ., ಮುಂಬೈಯ ದಕ್ಷಿಣ ನೈರುತ್ಯ ದಿಕ್ಕಿನಿಂದ 440 ಕಿ.ಮೀ. ಹಾಗೂ ಗುಜರಾತ್ (ವೆವೆರಲ್)ನಿಂದ 570 ಕಿ.ಮೀ. ದೂರದಲ್ಲಿ ಕಂಡುಬಂದಿದೆ. ಮಂಗಳವಾರ ಸಂಜೆ 6 ಗಂಟೆಯಿಂದ ಮುಂದಿನ ಆರು ಗಂಟೆಗಳ ಅವಧಿಯಲ್ಲಿ ತೀವ್ರ ಚಂಡಮಾರುತ ಕಾಣಿಸಿಕೊಳ್ಳಲಿದೆ.

ಕೇರಳವನ್ನು ಪ್ರವೇಶಿಸಿರುವ ಮುಂಗಾರು ಮಳೆ ರಾಜ್ಯದ ಕರಾವಳಿಯಲ್ಲೂ ಸಾಧಾರಣ ಮಳೆ ಸುರಿದಿದ್ದು, ನಿರಂತರ ಜಿಟಿಜಿಟಿ ಮಳೆ ಬಿದ್ದಿದೆ. ಮಂಗಳವಾರ ಮಧ್ಯಾಹ್ನ 2:30ರ ವೇಳೆಗೆ ಮುಂಗಾರು ಮಳೆ ರಾಜ್ಯಕ್ಕೆ ಪ್ರವೇಶಿಸಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ.

ಭಾರೀ ಅಲೆಗಳು

ರಾಜ್ಯದ ಕರಾವಳಿಯ ಮಂಗಳೂರಿನಿಂದ ಕಾರವಾರದವರೆಗೆ 1.5 ಮೀ.ನಿಂದ 3.6 ಮೀ.ವರೆಗೆ ಅಲೆಗಳು ಅಪ್ಪಳಿಸುತ್ತಿವೆ. ಲಕ್ಷದ್ವೀಪದಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ಸಮುದ್ರದಲ್ಲಿ 3 ಮೀ.ನಿಂದ 3.8 ಮೀ.ವರೆಗೆ ಅಲೆಗಳು ರಭಸದಿಂದ ಎತ್ತರಕ್ಕೆ ಜಿಗಿಯುತ್ತಿವೆ.
ಕೇರಳ ಭಾಗದ ಸಮುದ್ರ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ 6:30ರಿಂದ 2.5 ಮೀಟರ್‌ನಿಂದ 4.3 ಮೀಟರ್‌ವರೆಗೆ ಅಲೆಗಳು ಏಳುತ್ತಿವೆ. ಕೇರಳದ ಪೊಜಿಯೂರಿನಿಂದ ಕಾಸರಗೋಡಿನವರೆಗೆ ಎತ್ತರದಲ್ಲಿ ಅಲೆಗಳು ಅಬ್ಬರಿಸುತ್ತಿವೆ. ಇದು ಜೂ.13ರಂದು ರಾತ್ರಿ 11:30ರವರಗೆ ಮುಂದುವರಿಯಲಿದೆ.

ಮೀನುಗಾರರಿಗೆ ಎಚ್ಚರಿಕೆ

ರಾಜ್ಯದ ಕರಾವಳಿ, ಲಕ್ಷದ್ವೀಪ ಹಾಗೂ ಕೇರಳ ಭಾಗದ ಸಮುದ್ರದಲ್ಲಿ ಇನ್ನು ಎರಡು-ಮೂರು ದಿನಗಳ ಕಾಲ ಎತ್ತರದ ಅಲೆಗಳು ಏಳಲಿದ್ದು, ಜೂ.13ರವರೆಗೆ ಮೀನುಗಾರರು ಸಮುದ್ರಕ್ಕೆ ತೆರಳಬಾರದು ಎಂದು ಭಾರತೀಯ ಸಾಗರ ಮಾಹಿತಿ ಸೇವಾ ಇಲಾಖೆ (INCOIS) ಹಾಗೂ ಭಾರತೀಯ ಹವಾಮಾನ ಇಲಾಖೆಗಳು ಎಚ್ಚರಿಕೆ ನೀಡಿವೆ.

ಭಾರೀ ಗಾಳಿ

ಅರಬ್ಬಿ ಸಮುದ್ರದಲ್ಲಿ ಮಂಗಳವಾರದಿಂದ ಭಾರೀ ಗಾಳಿ ಬೀಸುತ್ತಿದ್ದು, ಕರ್ನಾಟಕ, ಲಕ್ಷದ್ವೀಪ ಹಾಗೂ ಕೇರಳ ಭಾಗದಲ್ಲಿ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಜೂ.13ರವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉಳ್ಳಾಲ ಕಡಲ್ಕೊರೆತ: ಮೂರು ಮನೆಗಳಿಗೆ ಹಾನಿ

ಕರಾವಳಿಗೆ ಮುಂಗಾರು ಪ್ರವೇಶಿಸಿದ ಎರಡನೇ ದಿನವೂ ಉಳ್ಳಾಲದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಸಮುದ್ರದ ಅಲೆಗಳು ಸೋಮವಾರ ತಡರಾತ್ರಿಯಿಂದ ಮನೆಗಳಿಗೆ ಅಪ್ಪಳಿಸಲು ಆರಂಭಿಸಿದ್ದು, ಮೂರು ಮನೆಗಳಿಗೆ ಹಾನಿಯಾಗಿವೆ.

ಉಳ್ಳಾಲದ ಕೈಕೊ ಹಾಗೂ ಹಿಲರಿನಗರದಲ್ಲಿ ಮೂರು ಮನೆಗಳು ಜಖಂಗೊಂಡಿವೆ. ಉಳ್ಳಾಲ ಹಾಗೂ ಉಚ್ಚಿಲ ಭಾಗದಲ್ಲಿ 60ಕ್ಕೂ ಹೆಚ್ಚು ಮನೆಗಳಿಗೆ ಅಲೆಗಳು ಅಪ್ಪಳಿಸಲು ಆರಂಭಿಸಿವೆ. ಕೈಕೊ ಹಾಗೂ ಹಿಲರಿನಗರಕ್ಕೆ ಮಂಗಳೂರು ಸಹಾಯಕ ಕಮಿಷನರ್ ನೇತೃತ್ವದ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿತು.

ಆತಂಕಗೊಂಡ ಸ್ಥಳೀಯರು

ಉಳ್ಳಾಲದಲ್ಲಿ 40ಕ್ಕೂ ಹೆಚ್ಚು ಮನೆಗಳು ಅಪಾಯದಂಚಿನಲ್ಲಿವೆ. ಇನ್ನು ಉಚ್ಚಿಲದಲ್ಲಿ 15ಕ್ಕೂ ಹೆಚ್ಚು ಮನೆಗಳು ಅಪಾಯದಂಚಿನಲ್ಲಿವೆ. ಹಿಲರಿಯಾನಗರದ ಮಸೀದಿಗೂ ಸಮುದ್ರದ ಅಲೆಗಳು ಅಪ್ಪಳಿಸುತ್ತಿವೆ. ಇಲ್ಲಿನ ಸಮೀಪದ ಮನೆಗಳಿಗೂ ಅಲೆಗಳು ಹೊಡೆತ ನೀಡುತ್ತಿವೆ. ಈಗಾಗಲೇ ಇಲ್ಲಿನ ಹಲವು ಮನೆಮಂದಿ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News