×
Ad

ಉಡುಪಿ ಜಿಲ್ಲೆಯಲ್ಲಿ 20 ಲಕ್ಷ ಗಿಡ ನೆಡುವ ಗುರಿ: ಡಾ.ಜಯಮಾಲಾ

Update: 2019-06-11 20:40 IST

ಉಡುಪಿ, ಜೂ.11: ಪರಿಸರ ಸಂರಕ್ಷಣೆಯ ಉದ್ದೇಶದಿಂದ ಜಿಲ್ಲೆಯಲ್ಲಿ ಈ ವರ್ಷ 20 ಲಕ್ಷ ಗಿಡಗಳನ್ನು ನೆಡುವ ಗುರಿಯನ್ನು ಹೊಂದಲಾಗಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯ ಮಾಲಾ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಪಂ, ತಾಪಂ, ವಾರಂಬಳ್ಳಿ ಗ್ರಾಪಂಗಳ ಸಹ ಯೋಗದಲ್ಲಿ ಮಂಗಳವಾರ ಬ್ರಹ್ಮಾವರ ಬಂಟರ ಭವನದಲ್ಲಿ ಆಯೋಜಿಸ ಲಾದ ಸ್ವಚ್ಛಮೇವ ಜಯತೇ ಮತ್ತು ಜಲಾಮೃತ ಆಂದೋಲನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮನುಕುಲ ಮಾತ್ರವಲ್ಲ ಪ್ರಾಣಿ, ಪಕ್ಷಿ, ಜಲಚರಗಳ ಉಳಿವಿಗಾಗಿ ಪರಿಸರ ವನ್ನು ಸಂರಕ್ಷಿಸಬೇಕಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿದಿರುವ ಉಡುಪಿ ಜಿಲ್ಲೆಯವರು ಮರ ಕಡಿಯುವುದರಲ್ಲಿಯೂ ಮೊದಲಿಗರಾಗಿದ್ದಾರೆ ಎಂಬ ಅಪಕೀರ್ತಿಗೂ ಒಳಗಾಗಿದ್ದಾರೆ. ಈ ತಪ್ಪನ್ನು ಸರಿಪಡಿಸಲು ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.

ಪರಿಸರ ಮತ್ತು ಜಲ ಸಂರಕ್ಷಣೆ ಉದ್ದೇಶದಿಂದ ರಾಜ್ಯದಲ್ಲಿ 20 ಸಾವಿರ ಚೆಕ್ ಡ್ಯಾಂಗಳ ನಿರ್ಮಾಣ, 14,000 ಕೆರೆ, ಕಟ್ಟೆ, ಕಲ್ಯಾಣಿ, ಗೋಕಟ್ಟೆಗಳ ಪುನಃಶ್ಚೇತನಗೊಳಿಸುವ ಕೆಲಸ ಮಾಡಲಾಗಿದೆ. ಜಿಲ್ಲೆಯಲ್ಲಿರುವ ಬಾವಿಗಳ ಹೂಳೆತ್ತುವ ಕಾರ್ಯದೊಂದಿಗೆ, ನೀರನ್ನು ಇಂಗಿಸುವ ಕಾರ್ಯವನ್ನೂ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಬೇರೆ ದೇಶಗಳಲ್ಲಿ ಸಮುದ್ರದ ನೀರನ್ನು ಶುದ್ದೀಕರಿಸಿ ಕುಡಿಯಲು ಬಳಕೆ ಮಾಡಲಾಗುತ್ತಿದೆ. ಆದರೆ ನಮಗೆ ಅದರ ಅಗತ್ಯತೆ ಎದುರಾಗಲಿಕ್ಕಿಲ್ಲ. ಗಿಡ ಗಳನ್ನು ನೆಡುವ ಮೂಲಕ ನಮ್ಮಲ್ಲಿರುವ ಜಲಮೂಲವನ್ನು ಹೆಚ್ಚಿಸಬೇಕು ಎಂದ ಅವರು, ನೀರಿನಿಂದ ಶೇ.80ರಷ್ಟು ರೋಗಗಳು ಬರುತ್ತಿವೆ. ಸ್ವಚ್ಛ ನೀರು ಕುಡಿ ಯುವುದರಿಂದ ರೋಗವನ್ನು ದೂರ ಮಾಡಬಹುದಾಗಿದೆ. ಅದೇ ರೀತಿ ಸ್ವಚ್ಚತೆ ಯಿಂದ ಆರೋಗ್ಯಯುತ ಸಮಾಜ ನಿರ್ಮಿಸಬಹುದಾಗಿದೆ ಎಂದರು. ಜಿಪಂ ಅಧ್ಯಕ್ಷ ದಿನಕರ ಬಾಬು ಸ್ವಚ್ಛತಾ ರಥಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷೆ ಶೀಲಾ ಶೆಟ್ಟಿ ಹಸಿರೀಕರಣಕ್ಕೆ ಚಾಲನೆ ನೀಡಿದರು. ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.

ಜಿಪಂ ಸದಸ್ಯರಾದ ಜನಾರ್ದನ ತೋನ್ಸೆ, ಮೈರ್ಮಾಡಿ ಸುಧಾಕರ ಶೆಟ್ಟಿ, ಶಿಲ್ಪಾಸುವರ್ಣ, ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನವೀನ್‌ಚಂದ್ರ ನಾಯಕ್, ಉಪಾಧ್ಯಕ್ಷೆ ಗಾಯತ್ರಿ, ತಾಪಂ ಸದಸ್ಯೆ ಗಾಯತ್ರಿ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಉಡುಪಿ ತಾಪಂ ಕಾರ್ಯನಿರ್ವಹಣಾದಿಕಾರಿ ರಾಜು, ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಸಿಡಿಪಿಓ ವೀಣಾ ಉಪಸ್ಥಿತರಿದ್ದರು.

ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರಂಬಳ್ಳಿ ಗ್ರಾಪಂ ಸದಸ್ಯ ಬಿರ್ತಿ ರಾಜೇಶ್ ಶೆಟ್ಟಿ ಸ್ವಾಗತಿಸಿ ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.

ತ್ಯಾಜ್ಯದಿಂದ 40 ಲಕ್ಷ ರೂ. ಆದಾಯ

ಜಿಲ್ಲೆಯಲ್ಲಿ ಎಸ್‌ಎಲ್‌ಆರ್‌ಎಂ ಘಟಕ ಆರಂಭವಾಗಿರುವ ದಿನದಿಂದ ಈವರೆಗೆ 2500 ಟನ್ ಒಣ ತ್ಯಾಜ್ಯ ಮತ್ತು 3500ಟನ್ ಹಸಿ ತ್ಯಾಜ್ಯ ಸಂಗ್ರಹಿಸಲಾಗಿದ್ದು, ಇದರಿಂದ ಗ್ರಾಪಂಗಳಿಗೆ 35ರಿಂದ 40ಲಕ್ಷ ರೂ. ಆದಾಯ ದೊರೆತಿದೆ. ರಾಜ್ಯಕ್ಕೆ ಇದು ಮಾದರಿ ಅನುಷ್ಠಾನ ಕಾರ್ಯಕ್ರಮವಾಗಿದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ತಿಳಿಸಿದರು.

ಜಿಲ್ಲೆಯಲ್ಲಿ ನೀರಿನ ಮಹತ್ವ ಕುರಿತು ಅರಿವು ಮೂಡಿಸಿ, ಸಾರ್ವಜನಿಕರನ್ನು ಜಲಸಾಕ್ಷರರನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಪ್ರತಿ ಗ್ರಾಪಂನಲ್ಲಿ 500 ಗಿಡ ನೆಡಲಾಗುವುದು. ಜಿಲ್ಲೆಯಾದ್ಯಂತ ಸ್ವಚ್ಛತಾ ರಥದ ಮೂಲಕ ಅರಿವು ಮೂಡಿಸುವ ಕಾರ್ಯ ನಡೆಯಲಿದೆ. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಲು 150 ಮಂದಿ ಗೈಡ್‌ಗಳಿಗೆ ತರಬೇತಿ ನೀಡ ಲಾಗಿದೆ. ಒಂದು ತಿಂಗಳ ಕಾಲ ನಿರಂತರವಾಗಿ ಕಾರ್ಯಕ್ರಮ ನಡೆಯಲಿದ್ದು, ವಿಶೇಷ ಗ್ರಾಮಸಭೆಯನ್ನು ಕೂಡ ಏರ್ಪಡಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News