‘ವಾಯು’ ಚಂಡಮಾರುತ ಗುಜರಾತ್‌ನತ್ತ
ಉಡುಪಿ, ಜೂ.11: ಅರಬಿಸಮುದ್ರದ ಲಕ್ಷದ್ವೀಪ ಆಸುಪಾಸಿನಲ್ಲಿ ಎದ್ದಿದ್ದ ‘ವಾಯು’ ಬಿರುಗಾಳಿ ತೀವ್ರತೆಯನ್ನು ಪಡೆದುಕೊಳ್ಳುತ್ತಾ ಉತ್ತರದತ್ತ ಸಾಗುತಿದ್ದ್ದು, ಇಂದು ಅಪರಾಹ್ನದ ವೇಳೆ ಗುಜರಾತ್‌ನ ವೀರಾವಲ್‌ನ ದಕ್ಷಿಣಕ್ಕೆ 650ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿತ್ತು ಎಂದು ಕೇಂದ್ರ ಹವಾಮಾನ ಇಲಾಖೆ ಬಿಡುಗಡೆಗೊಳಿಸಿದ ಇತ್ತೀಚಿನ ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ.
ಇದು ಇನ್ನಷ್ಟು ತೀವ್ರಗೊಂಡು ಮುಂದಿನ 12 ಗಂಟೆಗಳಲ್ಲಿ ಚಂಡಮಾರುತ ವಾಗಿ ಪರಿವರ್ತನೆಗೊಂಡು ಜೂ.13-14ರ ನಡುವೆ ಗುಜರಾತ್ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಮುಂದಿನ ಎರಡು ದಿನಗಳ ಕಾಲ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಅಲ್ಲಲ್ಲಿ ಗಾಳಿಯಿಂದ ಕೂಡಿದ ಸಾಧಾರಣದಿಂದ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಹೀಗಾಗಿ ಇನ್ನು ಎರಡು ದಿನ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ ತೀರ ಪ್ರದೇಶಗಳ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.