ಗೆಳತಿ ಮುಂಬೈಗೆ ಮರಳುವಂತೆ ಮಾಡಲು ಹೋದವನಿಗೆ 5 ಕೋ. ರೂ. ದಂಡ!

Update: 2019-06-11 15:36 GMT

ಅಹ್ಮದಾಬಾದ್,ಜೂ.11: ಜೆಟ್ ಏರ್‌ವೇಸ್‌ನ ವಿಮಾನವೊಂದರಲ್ಲಿ ಹೈಜಾಕ್ ಬೆದರಿಕೆಯ ಚೀಟಿಯನ್ನು ಇಟ್ಟಿದ್ದ ಮುಂಬೈನ ಉದ್ಯಮಿ ಬಿರ್ಜು ಸಲ್ಲಾ ಎಂಬಾತನಿಗೆ ಇಲ್ಲಿಯ ವಿಶೇಷ ಎನ್‌ಐಎ  ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ,ಜೊತೆಗೆ ಐದು ಕೋಟಿ ರೂ.ದಂಡವನ್ನೂ ವಿಧಿಸಿದೆ.

   2017,ಅಕ್ಟೋಬರ್ 30ರಂದು ಈ ಘಟನೆ ನಡೆದಿತ್ತು. ಮುಂಬೈ-ದಿಲ್ಲಿ ನಡುವಿನ ಜೆಟ್ ಏರ್‌ವೇಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಲ್ಲಾ ಟಾಯ್ಲೆಟ್‌ನಲ್ಲಿಯ ಟಿಶ್ಯೂ ಪೇಪರ್ ಪ್ಯಾಕ್‌ನ ಮೇಲೆ ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ವಿಮಾನ ಅಪಹರಣ ಬೆದರಿಕೆಯನ್ನು ಬರೆದಿಟ್ಟಿದ್ದ. ತನ್ಮೂಲಕ ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಸುರಕ್ಷತೆಯನ್ನು ಅಪಾಯದಲ್ಲಿ ಸಿಲುಕಿಸಿದ್ದ ಎಂದು ಎನ್‌ಐಎ ದೋಷಾರೋಪಣ ಪಟ್ಟಿಯಲ್ಲಿ ಆರೋಪಿಸಿತ್ತು. ವಿಮಾನವು ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬಳಿಕ ಸಲ್ಲಾನನ್ನು ಬಂಧಿಸಲಾಗಿತ್ತು.

 ಸಲ್ಲಾಗೆ ವಿಧಿಸಲಾಗಿರುವ ದಂಡದ ಮೊತ್ತವನ್ನು ಪೀಡಿತ ವಿಮಾನದಲ್ಲಿದ್ದ ಸಿಬ್ಬಂದಿಗಳು ಮತ್ತು ಪ್ರಯಾಣಿಕರಿಗೆ ಹಂಚುವಂತೆ ವಿಶೇಷ ಎನ್‌ಐಎ ನ್ಯಾಯಾಧೀಶ ಕೆ.ಎಂ.ದವೆ ಅವರು ಆದೇಶಿಸಿದ್ದಾರೆ.

ಈ ಘಟನೆಯ ಬಳಿಕ ಸಲ್ಲಾ ವಿಮಾನ ಪ್ರಯಾಣಕ್ಕೆ ಅವಕಾಶ ನಿರಾಕರಿಸಲ್ಪಟ್ಟಿರುವವರ ರಾಷ್ಟ್ರೀಯ ಪಟ್ಟಿಯಲ್ಲಿ ಮೊದಲಿಗನಾಗಿ ಸೇರ್ಪಡೆಗೊಂಡಿದ್ದ. ಅಲ್ಲದೆ 1982ರ ಹಳೆಯ ಕಾನೂನಿಗೆ ಬದಲಾಗಿ ತರಲಾಗಿರುವ ಕಠಿಣ ವಿಮಾನ ಅಪಹರಣ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲ್ಪಟ್ಟ ಮೊದಲ ವ್ಯಕ್ತಿಯೂ ಆಗಿದ್ದ.

ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದ ಸಲ್ಲಾ,ಇದರಿಂದಾಗಿ ಜೆಟ್ ಏರ್‌ವೇಸ್ ತನ್ನ ದಿಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸುತ್ತದೆ ಮತ್ತು ಅದರ ದಿಲ್ಲಿ ಕಚೇರಿಯಲ್ಲಿ ಉದ್ಯೋಗಿಯಾಗಿರುವ ತನ್ನ ಗೆಳತಿ ಮುಂಬೈಗೆ ಮರಳುತ್ತಾಳೆೆ ಎಂಬ ಆಸೆಯಿಂದ ಈ ಕೃತ್ಯವನ್ನು ಮಾಡಿದ್ದಾಗಿ ತನಿಖಾ ತಂಡಕ್ಕೆ ತಿಳಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News