ಮುಂದಿನ 5 ವರ್ಷಗಳಲ್ಲಿ 5 ಕೋಟಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ: ನಖ್ವಿ

Update: 2019-06-11 15:58 GMT

ಹೊಸದಿಲ್ಲಿ, ಜೂ.11: ಮುಂದಿನ ಐದು ವರ್ಷಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಐದು ಕೋಟಿ ವಿದ್ಯಾರ್ಥಿಗಳಿಗೆ ಮೆಟ್ರಿಕ್‌ಪೂರ್ವ, ಮೆಟ್ರಿಕ್ ನಂತರದ ಮತ್ತು ಅರ್ಹತೆ ಮತ್ತು ಆದಾಯ ಆಧಾರಿತ ಅನೇಕ ವಿದ್ಯಾರ್ಥಿವೇತನಗಳನ್ನು ನೀಡಲಾಗುವುದು. ಈ ಪೈಕಿ ಶೇ.50 ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿನಿಯರಿಗೆ ನೀಡಲಾಗುವುದು ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ತಿಳಿಸಿದ್ದಾರೆ.

ಹೊಸದಿಲ್ಲಿಯ ಅಂತ್ಯೋದಯ ಭವನದಲ್ಲಿ ಮೌಲಾನ ಆಝಾದ್ ಶಿಕ್ಷಣ ಪ್ರತಿಷ್ಠಾನದ 65ನೇ ಸಾಮಾನ್ಯ ಸಭೆಯಲ್ಲಿ ಮಾತನಾಡುವ ವೇಳೆ ಅವರು ಈ ವಿಷಯ ತಿಳಿಸಿದ್ದಾರೆ. ಮೋದಿ ಸರಕಾರ ಕೋಮುವಾದದ ರೋಗ ಮತ್ತು ಓಲೈಕೆ ರಾಜಕೀಯವನ್ನು ತೊಡೆದುಹಾಕಿ ಒಳಗೊಳ್ಳುವಿಕೆಯ ಬೆಳವಣಿಗೆಯ ಆರೋಗ್ಯಪೂರ್ಣ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ನಖ್ವಿ ತಿಳಿಸಿದ್ದಾರೆ. ಶಾಲೆಯಿಂದ ಹೊರಗುಳಿದಿರುವ ಅಲ್ಪಸಂಖ್ಯಾತ ಸಮುದಾಯದ ಹೆಣ್ಮಕ್ಕಳನ್ನು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಬ್ರಿಡ್ಜ್ ಕೋರ್ಸ್ ಮೂಲಕ ಶಿಕ್ಷಣ ಮತ್ತು ಉದ್ಯೋಗದ ಜೊತೆ ಸಂಪರ್ಕಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ದೇಶಾದ್ಯಂತವಿರುವ ಮದರಸಗಳ ಶಿಕ್ಷಕರಿಗೆ ಹಿಂದಿ, ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಕಂಪ್ಯೂಟರ್ ಶಿಕ್ಷಣ ಒದಗಿಸಲಾಗುವುದು. ಆಮೂಲಕ ಅವರು ಮದರಸದ ವಿದ್ಯಾರ್ಥಿಗಳಿಗೆ ಮುಖ್ಯವಾಹಿನಿಯ ಶಿಕ್ಷಣವನ್ನು ನೀಡಲು ಅರ್ಹರಾಗುತ್ತಾರೆ ಎಂದು ನಖ್ವಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News